ಮೂಡುಬಿದಿರೆ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅಲಹಾಬಾದ್ (ಐಐಐಟಿ-ಎ) ಹಾಗೂ ಆಳ್ವಾಸ್ ಇಂಜಿನಿಯರ್ ಕಾಲೇಜಿನ ನಡುವಿನ ಒಪ್ಪಂದವನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಣೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದ್ದ ಒಪ್ಪಂದದಿಂದಾಗಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ, ಅವಕಾಶಗಳು ಸಿಕ್ಕಿವೆ. ರಾಜ್ಯದ ಎರಡು ಖಾಸಗಿ ಶಿಕ್ಷಣ ಸಂಸ್ಥೆಗಳು ಐಐಐಟಿ ಜೊತೆ ಒಡಂಬಡಿಕೆ ಮಾಡಿದ್ದು, ಅದರಲ್ಲಿ ಆಳ್ವಾಸ್ ಕೂಡ ಒಂದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಡಂಬಡಿಕೆಯಿಂದಾಗಿ ಇಂಟರ್ನ್ಶಿಪ್, ಸಂಶೋಧನೆ ಮತ್ತು ಕಾರ್ಯಾಗಾರಗಳನ್ನು ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ವಾಂಸರ ತಂಡವು ಡೇಟಾ ವಿಶ್ಲೇಷಣೆ, ತಾಂತ್ರಿಕ ಕಲಿಕೆ ಪೈಥಾನ್, ಜಾವಾ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ಆಳವಾದ ಅಧ್ಯಯನ ನಡೆಸಲಾಗುತ್ತದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಪಿಎಚ್ಡಿಯಂತಹ ಉನ್ನತ ವ್ಯಾಸಂಗ ನಡೆಸುವಲ್ಲಿಯೂ ಸಹಕಾರಿಯಾಗಿದೆ. ಐಐಐಟಿ-ಎ ಜೊತೆ ಉತ್ತಮ ಸಂಬಂಧ ವೃದ್ಧಿಸಲು ಆಳ್ವಾಸ್ ಪಿಯು ಕಾಲೇಜಿನ ಹಳೇ ವಿದ್ಯಾರ್ಥಿ ಜಾವೇದ್ ಅವರ ಪಾತ್ರ ಮಹತ್ವದ್ದು ಎಂದು ವಿವೇಕ್ ಆಳ್ವ ತಿಳಿಸಿದರು.
ಆನ್ಲೈನ್ ಮೂಲಕ ಮಾತನಾಡಿದ ಐಐಐಟಿ-ಎ ನಿರ್ದೇಶಕ ಡಾ.ನಾಗಭೂಷಣ್, ಈ ಒಪ್ಪಂದವು ಎರಡೂ ಸಂಸ್ಥೆಗಳು ಒಟ್ಟಿಗೆ ಅಭಿವೃದ್ಧಿಯಾಗಲು ಸಹಕಾರಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಒಡಂಬಡಿಕೆ ಪೂರಕ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಹೇಳಿದರು.
ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಹರೀಶ್ ಕುಂದರ್, ಮಂಜುನಾಥ್ ಕೊಟ್ಟಾರಿ, ಡಿ.ವಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
