ಸುದ್ದಿ9ಬಂಟ್ವಾಳ, ಅ.27- ಬಿ.ಸಿ.ರೋಡಿನ ನಿರಂತರ ಟ್ರಾಫಿಕ್ ನ ಸಮಸ್ಯೆಯಿಂದ ಉಂಟಾಗುತ್ತಿದ್ದ ಕಿರಿಕಿರಿ ಹಾಗೂ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಎಸ್ಪಿ ರಾಹುಲ್ ಕುಮಾರ್ ಅವರು ಇಂದು ಬೆಳಿಗ್ಗೆಯಿಂದಲೇ ಬಿ.ಸಿ.ರೋಡ್ ನಲ್ಲಿ ಟ್ರಾಫಿಕ್ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದರು.
ಬಿ.ಸಿ.ರೋಡಿನ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮುಗಿಯದೆ ಈ ಸಮಸ್ಯೆಯನ್ನು ನಿವಾರಣೆ ಮಾಡಲು ಸಾಧ್ಯವಿಲ್ಲ. ಪ್ರತೀ ಸೋಮವಾರ ಹಾಗೂ ಸಭೆ ಸಮಾರಂಭಗಳಿದ್ದ ಸಂದರ್ಭ ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಎಎಸ್ಪಿ ರಾಹುಲ್ ಕುಮಾರ್ ಅವರು ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾಗಿದ್ದಾರೆ.
ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದರಿಂದ, ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಿರುವುದು, ಆಟೋ ಚಾಲಕರ ಪಾಕರ್ಿಂಗ್ ನ ಅವ್ಯವಸ್ಥೆಯಿಂದಾಗಿ ಹಾಗೂ ಕೆಎಸ್ಆರ್ ಟಿಸಿ, ಖಾಸಗಿ ಬಸ್ಸುಗಳು ಬೇಕಾಬಿಟ್ಟಿ ಬಸ್ ನಿಲುಗಡೆ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಸಂಚಾರಿ ನಿಯಮ ಪಾಲಿಸದೇ ಇರುವ ವಾಹನ ಸವಾರರ ವಿರುದ್ಧ ಪೊಲೀಸರು ಕ್ರಮಕೈಗೊಂಡಾಗ ಅಥವಾ ಅಂಥವರನ್ನು ಠಾಣೆಗೆ ಕರೆ ತಂದಾಗ ರಾಜಕೀಯ ಮುಖಂಡರು ತಮ್ಮ ಪ್ರಭಾವ ಬಳಸಿ ಪೊಲೀಸರು ಕ್ರಮಕೈಗೊಳ್ಳದಂತೆ ಒತ್ತಡ ಹೇರುವುದು ಹಾಗೂ ದಂಡ ವಿಧಿಸದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರನ್ನು ಬಿಡುಗಡೆಗೊಳಿಸುತ್ತಿರುವುದೂ ಈ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ರೀತಿಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಬಿ.ಸಿ.ರೋಡ್ ರಸ್ತೆಗಿಳಿದಿರುವ ಎಎಸ್ಪಿ ರಾಹುಲ್ ಕುಮಾರ್ ಅವರು, ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳನ್ನು ಠಾಣೆಗೆ ಕಳುಹಿಸಿ ದಂಡ ವಿಧಿಸಿದ್ದಾರೆ. ಮನಸಿದ್ದರೆ ಸಮಸ್ಯೆ ನಿವಾರಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುವ ರಾಹುಲ್ ಕುಮಾರ್ ಸಂಚಾರಿ ನಿಯಮ ಉಲ್ಲಂಘಿಸಿದರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಹಾಗೂ ಸ್ವತಃ ರಸ್ತೆಗಿಳಿದು ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.







