ಮುಂಬಯಿ: ಸಾಹಿತ್ಯ ಮತ್ತು ಸಂಗೀತದ ಮೂಲಕ ತುಳುವನಾಡಿನ ಭಾಷೆ, ಸಂಸ್ಕೃತಿ ಮತ್ತು ತಾಯ್ನೆಲದ ಹಿರಿಮೆ ಗರಿಮೆಗಳನ್ನು ಜಗತ್ತಿನೆಲ್ಲೆಡೆಗೆ ಪಸರಿಸುವ ಕಾರ್ಯವನ್ನು ಶ್ರದ್ದೆ ನಿಷ್ಠೆಯಿಂದ ಮಾಡುತ್ತಾ ಬಂದಿರುವ ಸಾಂಸ್ಕೃತಿಕ ರಾಯಭಾರಿ ಐಲೇಸಾ ಸಂಸ್ಥೆಗೆ ಇದೇ ಆಗಸ್ಟ್-೧೪ ರಂದು ವರುಷದ ಹರುಷ ತುಂಬಿದ ಸಂಭ್ರಮದ ದಿವಸ.
ಸಂಗೀತ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.? ಪ್ರತಿಯೊಬ್ಬರ ಹೃದಯವನ್ನು ಮುಟ್ಟುವ ಮನವನ್ನು ತಟ್ಟುವ ಕಲೆಯ ರೂಪವದು. ಅದಕ್ಕೆ ಭಾಷೆ ಇಲ್ಲ, ಅನುಭವಿಸುವ ಮನಸ್ಸಿದ್ದರೆ ಸಾಕಾಗುತ್ತದೆ. ಪ್ರಕೃತಿಯ ಸುಂದರವಾದ ಕೊಡುಗೆಯೇ ಸಂಗೀತವಂತೆ. ಬೀಸುವ ಗಾಳಿ, ಹರಿಯುವ ನದಿ, ಸಮುದ್ರದ ಅಲೆಗಳು, ಹಕ್ಕಿಯ ಚಿಲಿಪಿಲಿ, ಆವರಿಸುವ ಮೋಡಗಳು, ಭೃಂಗದ ನಾದ ಇವೆಲ್ಲದರಲ್ಲೂ ಸಂಗೀತವಿದೆ. ಇಂತಹ ಭಾವನಾತ್ಮಕ ಭಾಂದವ್ಯವನ್ನು ಬೆಸೆಯುವ ಮತ್ತು ಸ್ವರಲೋಕವನ್ನೆ ಸರ್ವಸ್ವ ಎಂದುಕೊAಡಿರುವ ಗಾನಲೋಕದ ಗಾರುಡಿಗ ರಮೇಶ್ಚಂದ್ರ (ಬೆಂಗಳೂರು) ಅವರ ಪರಿಕಲ್ಪನೆಯಲ್ಲಿ ಜನ್ಮತಾಳಿ ಜಗದರಮನೆಗೆ ಕಾಲಿಟ್ಟು, ಮೊದಲ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ಸಂಸ್ಥೆಯೇ ಐ ಲೇಸಾ ದಿ ವಾಯ್ಸ್ ಆಫ್ ಒಶಿಯಾನ್ ಎಂದು ಟೀಮ್ ಐಲೇಸಾ ಇದರ ಸುರೇಂದ್ರಕುಮಾರ್ ಮಾರ್ನಾಡ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಹೆಸರೇ ಅದೆಷ್ಟು ಆಪ್ತ. ಐ ಲೇಸ ಅಂದಾಗ ಕಡಲು ಮತ್ತು ಹಡಗು ನೆನಪಾಗುತ್ತದೆ. `ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ..’ ಅನ್ನುವಂತೆ ಇದು ಕೇವಲ ದಡವನ್ನು ಮಾತ್ರ ಮುಟ್ಟುವ ಕೆಲಸವನ್ನು ಮಾಡಿದ್ದಲ್ಲ. ಸಪ್ತಸಾಗರದಾಚೆ ಇಪ್ಪತ್ತೇಳು ದೇಶಗಳಿಗೆ ತಲುಪಿ, ಸಪ್ತಸ್ವರವನ್ನು ನುಡಿಸಲಾರಂಬಿಸಿತು. ರಮೇಶ್ ಚಂದ್ರರ ಜತೆಗೆ ಒಂದಿಷ್ಟು ಸಮಾನ ಮನಸ್ಕ ಸಜ್ಜನರು ಒಗ್ಗೂಡಿ ಕೊಂಡರು.
ಕೊರೋನ ಮಹಾಮಾರಿಯ ಅಟ್ಟಹಾಸದಿಂದ ಪ್ರತಿಯೊಂದು ಮನಸ್ಸುಗಳು ಭಯದಿಂದ ಮೌನವಾಗಿ ಮುದುಡಿ ಕುಳಿತಿದ್ದ ಸಮಯವದು.ಆಗ ದೈರ್ಯ ಎಂಬ ತಂಬೂರಿ ಹಿಡಿದು,ಪ್ರೀತಿ ಎಂಬ ತಂತಿಯ ಮೀಟುತ್ತ,ತನ್ನ ಪಾಡಿಗೆ ತಾನು ಹಾಡುತ್ತಾ ಬಂದಿದ್ದೆ ಈ ಐ ಲೇಸ ದಿ ವಾಯ್ಸ್ ಆಫ್ ಒಷಿಯನ್.
ತುಳುವ ನಾಡಿನ ಕವಿಗಳಿಂದ ರಚಿಸಲ್ಪಟ್ಟ ನೂರೊಂದು ಕವಿತೆಗಳ ಪುವೆಂಪು ಕವನ ಸಂಕಲನವನ್ನು ಬಿಡುಗಡೆ ಮಾಡಿ ತುಳು ಸಾಹಿತ್ಯದ ಅಗಾಧತೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮೊದಲಾಗಿ ಮಾಡಿತು.ಆ ನಂತರದಲ್ಲಿ ಝೂಮ್ ನಲ್ಲಿ ನಿರಂತರವಾಗಿ ಸೃಜನಾತ್ಮಕ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದ ಹೆಗ್ಗಳಿಕೆ ಇದಕ್ಕೆ ಸಲ್ಲಲೇಬೇಕು ಎಂದು ನಾಡಿನ ಹಿರಿಕಿರಿ ವಿದ್ವಾಂಸರ ಅಭಿಮತ.
ದೇಶವಿದೇಶದ ಶ್ರೇಷ್ಠ ವಿದ್ವಾಂಸರು, ಹಿರಿಯ ಕಿರಿಯ ಸಾಹಿತಿಗಳು ಹಾಗೂ ವಿಚಾರವಂತರನ್ನು ಕರೆಸಿ ಸಂವಾದ ಗೋಷ್ಠಿಗಳನ್ನು, ಕಮ್ಮಟಗಳನ್ನು ಏರ್ಪಡಿಸಿದ ಕೀರ್ತಿ ಈ ಸಂಸ್ಥೆಗಿದೆ. ಮುಖ್ಯವಾಗಿ ಗಾನವೈಭವ, ಮಕ್ಕಳ ಹಾಡಿನ ಸ್ಪರ್ದೆ,ಭಜನಾ ಸಪ್ತಾಹಗಳಲ್ಲದೆ, ಸತತ ಏಳು ದಿನಗಳ ಕಾಲ ಇಸ್ಕಾನ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಸಿಕೊಟ್ಟ `ತುಳು ಜಾಲ್ಡ್ ಕೃಷ್ಣ ಪಾರ್ದಾನ’ ಎನ್ನುವ ಹೆಸರಿನಲ್ಲಿ `ಭಗವತ್ಗೀತೆಯ’ ಸಂದೇಶವನ್ನು ತುಳುವಿನಲ್ಲಿಯೆ ವಾಚಿಸಿರುವುದು ಚಾರಿತ್ರಿಕ ಸಾಧನೆಯೇ ಆಗಿದೆ. ಈ ಪ್ರವಚನ ವೇಳೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರಲ್ಲದೆ ದಕ್ಷಿಣ ಕನ್ನಡ ಅವಳಿ ಜಿಲ್ಲೆಯ ಮಠ ಮಾನ್ಯಗಳ ಯತಿಶ್ರೇಷ್ಠರು ಆಶೀರ್ವಚನ ಮಾಡಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವುದು ನಿಜಕ್ಕೂ ಅವರ್ಣನೀಯ ಸಂಗತಿಯೇ ಹೌದು ಐ ಲೇಸಾ ಹಿತೈಷಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಐ ಲೇಸ ಆಯೋಜಿಸುವ ಕಾರ್ಯಕ್ರಮದ ಒಟ್ಟು ವ್ಯವಸ್ಥೆ,ಸಮಯ ಪಾಲನೆ, ನಿರೂಪಣೆ ಮತ್ತು ಗುಣಮಟ್ಟವೂ ಇತರರಿಗೆ ಮಾದರಿ ಎನಿಸಿಕೊಂಡಿದೆ. ಅನೇಕ ಸಂಸ್ಥೆಗಳು ಇದನ್ನು ಅನುಸರಿಸಿದ ಉದಾಹರಣೆಗಳು ಇವೆ. ಕೇವಲ ಜಿಲ್ಲೆಗೆ ಮಾತ್ರವಲ್ಲ ರಾಜ್ಯ ದೇಶಗಳ ಗಡಿಯನ್ನು ದಾಟಿ ವಿದೇಶಗಳಲ್ಲೂ ಐ ಲೇಸ ಇವತ್ತು ನೆಚ್ಚಿನ ಸಂಸ್ಥೆಯಾಗಿ ಬೆಳೆದು ನಿಂತಿರುವುದು ತುಳುನಾಡಿನ ಪಾಲಿಗೆ ಹೆಮ್ಮೆಯ ವಿಚಾರ.
ಕೇವಲ ವರುಷ ಒಂದರಲ್ಲೇ ಜನಮಾನಸದಲ್ಲಿ ಇಷ್ಟೆತ್ತರಕ್ಕೆ ಅರಳಿ ನಿಂತಿರುವ ಐ ಲೇಸ ಸಂಸ್ಥೆಯು ಆಗಸ್ಟ್ ಹದಿನಾಲ್ಕರಂದು ಪ್ರಥಮ ಬರ್ತೆ್ಡÃಯನ್ನು ಆಚರಿಸಿಕೊಳ್ಳುತ್ತಿದೆ. ಆ ದಿನ ಸಂಜೆ ಏಳು ಗಂಟೆಗೆ ಐ ಲೇಸದ `ಸರಿಗಮಪದ’ ಎನ್ನುವ ಗಾನ ವೈಭವವಿದೆ. ಸಂಗೀತದ ಸಪ್ತಸ್ವರಗಳ ಆಲಾಪನೆಯಲ್ಲಿ ನಮ್ಮೆಲ್ಲರ ಮನವು ಲೀನವಾಗಲಿ. ಪ್ರತಿಯೊಂದು ಸ್ವರಕ್ಕೂ ಅದರದ್ದೇ ಆದ ನಾದವಿದೆ, ಭಾಷೆಯಿದೆ, ವಿಸ್ತಾರವಿದೆ, ಆತ್ಮವಿದೆ, ಭಾವವಿದೆ, ಲಯ ಇದೆ ಮತ್ತು ಅಲ್ಲಿ ನಿಮ್ಮ ಉಪಸ್ಥಿತಿಯು ಇರುತ್ತದೆ. ನಿಮಗಾಗಿ ನಿಮ್ಮ ಬರುವಿಕೆಗಾಗಿ ಐ ಲೇಸ ಕಾಯುತ್ತಿರುತ್ತದೆ ಎಂದು ಐ ಲೇಸ ದಿ ವಾಯ್ಸ್ ಆಫ್ ಒಷಿಯನ್ ಪರಿವಾರ ಮತ್ತು ಮುಂಬಯಿ ಸಂಘಟಕ ಸುರೇಂದ್ರಕುಮಾರ್ ಮಾರ್ನಾಡ್ ಆಶಯ ವ್ಯಕ್ತ ಪಡಿಸಿದ್ದಾರೆ.
