ಮುಂಬಯಿ :ತುಳು ಕನ್ನಡ ಮಲಯಾಳದಲ್ಲಿ ಅವಕಾಶ ಪಡೆದ ಪ್ರತಿಭಾವಂತ ಇದು ಸುಮಾರು ೧೫ ವರ್ಷಗಳ ಹಿಂದಿನ ಮಾತು. ಮಂಗಳೂರಿನ ಪುರಭವನದಲ್ಲಿ ಕುದ್ರೋಳಿ ಗಣೇಶ್ ಅವರ ಜಾದೂ ಕಾರ್ಯಕ್ರಮದಲ್ಲಿ ನಾನು ಸಭಿಕನಾಗಿದ್ದೆ. ಕಾರ್ಯಕ್ರಮ ನೀಡುತ್ತಾ ಗಣೇಶ್ ಅವರು ಸಭೆಯಿಂದ ಮರ್ನಾಲ್ಕು ಮಕ್ಕಳನ್ನು ವೇದಿಕೆಗೆ ಕರೆದರು. ಎಲ್ಲರೂ ಪುಟ್ಟ ಮಕ್ಕಳು. ಅದರಲ್ಲೊಬ್ಬ ಬಾಲಕನಂತೂ ಯಾವುದೇ ನರ್ವಸ್ ಇಲ್ಲದೆ ಗಣೇಶ್ ಹೇಳಿದಂತೆ ಮಾಡುತ್ತಿದ್ದ. ಆ ಬಾಲಕನ ಲವಲವಿಕೆ, ಉತ್ಸಾಹ ಕಂಡು ಈತ ಮುಂದೊಬ್ಬ ಸಾಧಕನಾಗುತ್ತೇನೆ ಎಂದು ಆಗಲೇ ಭಾವಿಸಿದ್ದೆ. ಅದೀಗ ನಿಜವಾಗುತ್ತಿದೆ. ಆ ಬಾಲಕನೇ ನಾನು ಈಗ ನೋಡುತ್ತಿರುವ ಭರವಸೆಯ ಪ್ರತಿಭಾವಂತ ಸಿನಿಮಾ ನಟ ಪ್ರಜ್ವಲ್ ಯಾನೆ ಅಥರ್ವ ಪ್ರಕಾಶ್
ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸತ್ಯಪ್ರಕಾಶ್ ಅವರಿಂದ ಅಥರ್ವ ಎಂದು ಹೆಸರು ಬದಲಾಯಿಸಿ ಕೊಂಡಿರುವ ಪ್ರಜ್ವಲ್ ಅವರು ಮಂಗಳೂರಿನ ಪ್ರತಿಭೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಮಲಯಾಳ ಸಿನಿಮಾಕ್ಕೂ ಆಯ್ಕೆಯಾಗಿದ್ದಾನೆ. ಈತನನ್ನು ಒಮ್ಮೆ ಕಂಡರೆ ನಿರ್ದೇಶಕರು ಒಂದು ಪಾತ್ರ ನೀಡದೆ ಬಿಡುವುದೇ ಇಲ್ಲ. ಈತನ ಕಣ್ಣಲ್ಲಿ ಅಂಥ ಕಾಂತಿಯಿದೆ, ನಟನೆಯ ಸೆಳೆತವಿದೆ, ಪ್ರತಿಭೆಯ ಪ್ರತಿಬಿಂಬವಿದೆ.
ತುಳು ಚಲನಚಿತ್ರ ನಿರ್ದೇಶಕ ಸಂತೋಷ್ ಮಾಡ ಅವರ ಮಾತಿನಲ್ಲೇ ಹೇಳುವುದಾದರೆ, ನನಗೆ ಚಿತ್ರೋದ್ಯಮಿ ಪ್ರಕಾಶ್ ಪಾಂಡೇಶ್ವರ ಅವರು ತಮ್ಮ ಪುತ್ರ ಪ್ರಜ್ವಲ್ನನ್ನು ಒಂದು ದಿನ ಪರಿಚಯ ಮಾಡಿದರು. ಆಗ ನಾನು ಲಕ್ಕಿ ಬಾಬು ತುಳು ಸಿನಿಮಾದ ಕೆಲಸದಲ್ಲಿ ನಿರತನಾಗಿದ್ದೆ. ಮೊದಲ ಬಾರಿಗೆ ಆ ಹುಡುಗನನ್ನು ಕಂಡ ಕೂಡಲೇ ಈತನಲ್ಲಿ ಏನೋ ವಿಶೇಷವಿದೆ ಎಂದನಿಸಿತು. ಕೇಳಿದಾಗ ಆತ ನಟನೆಯ ತರಬೇತಿ ಪಡೆದಿದ್ದಾನೆ ಎಂಬುದು ತಿಳಿಯಿತು. ಇವನಿಗೆ ಲಕ್ಕಿ ಬಾಬು ಸಿನಿಮಾದಲ್ಲಿ ಒಂದು ಅವಕಾಶ ನೀಡಬೇಕು ಎಂದು ಬಯಸಿದೆ. ಆದರಲ್ಲಿ ಕಥೆಯಲ್ಲಿ ಆತನಿಗಾಗುವ ರೋಲ್ ಇರಲಿಲ್ಲ. ನನ್ನ ಆಸೆಯನ್ನು ಸ್ಕ್ರಿಪ್ಟ್ ರೈಟರ್ ಶಶಿರಾಜ್ ಕಾವೂರು ಅವರಲ್ಲಿ ತಿಳಿಸಿದೆ. ಅವರು ಮುಂದೆ ಈ ಪ್ರಜ್ವಲ್ಗಾಗಿ ಒಂದು ರೋಲ್ ಕ್ರಿಯೇಟ್ ಮಾಡಿದರು.
ಆ ರೋಲ್ ಸ್ವಲ್ಪ ಕಷ್ಟದ್ದೇ ಆಗಿತ್ತು. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಘಟಾನುಘಟಿಗಳ ಮುಂದೆ ಬಂದು ಅಭಿನಯಿಸಬೇಕಾಗಿತ್ತು. ಆತನಿಗೆ ಕಥೆಯನ್ನು ವಿವರಿಸಿದೆ. ಅದನ್ನು ಸಮರ್ಥವಾಗಿ ನಿರ್ವಹಿಸಲು ಅವರು ಪಟ್ಟ ಶ್ರಮ, ಅದರ ಫಲವಾಗಿ ಒಂದೇ ಟೇಕ್ನಲ್ಲಿ ತನ್ನ ಜವಾಬ್ದಾರಿಯನ್ನು ನಿರೀಕ್ಷೆಗೂ ಮೀರಿ ಸಮರ್ಥವಾಗಿ ನಿಭಾಯಿಸಿದ್ದು ಆ ಹುಡುಗನಲ್ಲಿರುವ ಪ್ರತಿಭೆಗೆ ಸಾಕ್ಷಿಯಾಗಿದೆ.
ಪುನೀತ್ ನಿರ್ಮಾಣದ ಮ್ಯಾನ್ ಆಫ್ ಮ್ಯಾಚ್ನಲ್ಲಿ ಅಥರ್ವ ಪ್ರಕಾಶ್ ರಾಮ ರಾಮಾ ರೇ, ಒಂದಲ್ಲ ಎರಡಲ್ಲ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಅವರು ಈಗ ಪುನೀತ್ ರಾಜ್ಕುಮಾರ್ ನಿರ್ಮಾಣದ ಮ್ಯಾನ್ ಆಫ್ ಮ್ಯಾಚ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ಈ ಪ್ರಜ್ವಲ್ಗೆ ಒಂದು ಮುಖ್ಯ ಪಾತ್ರವಿದೆ. ಇಡೀ ಸಿನಿಮಾದ ಆಕರ್ಷಣೆಯೇ ಈತನ ರೋಲ್. ಪುನೀತ್ ಅವರ ಪಿಆರ್ಕೆ ಮತ್ತು ಸತ್ಯ ಅವರ ಸತ್ಯ ಆಂಡ್ ಮಯೂರ ಪಕ್ರ್ಸ್ ಬ್ಯಾನರ್ನಡಿಯಲ್ಲಿ ಹೊರಬರುತ್ತಿರುವ ಈ ಸಿನಿಮಾದಲ್ಲಿ ಅಥರ್ವನ ನಟನೆಯನ್ನು ಗಮನಿಸಿದ ನಿರ್ದೇಶಕರೊಬ್ಬರು ಶೂಟಿಂಗ್ ಸ್ಪಾಟ್ನಲ್ಲೇ ಅಥರ್ವನಿಗೆ ಹೊಸ ಅವಕಾಶವೊಂದನ್ನು ನೀಡಿ ಅವರ ಮುಂದಿನ ಸಿನಿಮಾಕ್ಕೆ ಆರಿಸಿಕೊಂಡಿದ್ದಾರೆ.
ಕನ್ನಡದ ನಾನ್ ವೆಜ್ ಎಂಬ ಸಿನಿಮಾದಲ್ಲೂ ನಟಿಸಿರುವ ಪ್ರಜ್ವಲ್ನನ್ನು ಬೆಂಗಳೂರಿಗೆ ಕರೆಸಿಕೊಂಡು ಮ್ಯಾನ್ ಆಫ್ ಮ್ಯಾಚ್ಗಾಗಿ ನಿರ್ದೇಶಕರು ಅಗತ್ಯ ತರಬೇತಿಯನ್ನೂ ನೀಡಿದ್ದಾರೆ. ಮುಖ್ಯವಾಗಿ ಬೆಂಗಳೂರಿನ ಕನ್ನಡ ಮಾತನಾಡುವ ತರಬೇತಿ ನೀಡಿದ್ದಾರೆ. ಭಾಷೆ ಕಲಿಯುವುದೆಂದರೆ ಪ್ರಜ್ವಲ್ಗೆ ತುಂಬಾ ಖುಷಿ. ಈಗಾಗಲೇ ತುಳು, ಕನ್ನಡ, ಮಲಯಾಳಂ, ತಮಿಳು, ಹಿಂದಿ, ಇಂಗ್ಲೀಷ್ ಮುಂತಾದ ಹಲವಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಪ್ರಜ್ವಲ್ ಬೆಂಗಳೂರು ಕನ್ನಡವನ್ನು ಸಲೀಸಾಗಿ ಕರಗತ ಮಾಡಿಕೊಂಡಿದ್ದಾನೆ.
ರೊಮ್ಯಾನ್ಸ್ ಪಾತ್ರಗಳಿಗೆ ಹೇಳಿ ಮಾಡಿಸಿದ ನಟ ಈಗ ಕೆಲವು ಪ್ರೇಮಕಥೆಗಳನ್ನು ಸಿದ್ಧಪಡಿಸಿ ಸೂಕ್ತ ನಾಯಕ ನಟನಿಗಾಗಿ ಎಷ್ಟೋ ನಿರ್ದೇಶಕರು ಹುಡುಕಾಟ ನಡೆಸುತ್ತಿದ್ದಾರೆ. ಕನ್ನಡದಲ್ಲಿ ಸೂಕ್ತ ಹೊಸ ನಾಯಕ ನಟನ ಕೊರತೆ ಕಂಡು ಬರುತ್ತಿವೆ. ನಮ್ಮ ಕೆಲವು ಪ್ರಮುಖ ನಾಯಕರು ದರ್ಶನ್, ಸುದೀಪ್, ಯಶ್, ಪ್ರೇಮ್, ವಿಜಯ್, ದ್ರುವಸರ್ಜಾ, ಮುರಳಿ ಇವರೆಲ್ಲ ಒಂದು ಹಂತ ಮೀರಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಬರುತ್ತಿರುವ ಹೊಸಬರಲ್ಲಿ ಸೂಕ್ತ ನಾಯಕ ನಟರ ಕೊರತೆಯಿದೆ ಎಂಬ ಮಾತು ನಿರ್ದೇಶಕರಿಂದ ಕೇಳಿ ಬರುತ್ತಿದೆ.
ಈಗ ಪ್ರಜ್ವಲ್ (ಅಥರ್ವ)ನನ್ನು ಕಂಡ ನಿರ್ದೇಶಕರಲ್ಲಿ ಒಂದು ಹೊಸ ಭರವಸೆ ಮೂಡಿದೆ. ಪ್ರೇಮ ಸನ್ನಿವೇಶಗಳಲ್ಲಿ ಪ್ರಜ್ವಲ್ನ ನಟನೆ ಅಷ್ಟು ಮನಸ್ಪರ್ಶಿಯಾಗಿದೆ. ಇದೇ ಕಾರಣದಿಂದಾಗಿ ಪ್ರಜ್ವಲ್ಗೆ ಈಗ ಕನ್ನಡ ಮಾತ್ರವಲ್ಲದೆ ಮಲಯಾಳದಿಂದಲೂ ಬೇಡಿಕೆ ಬರುತ್ತಿದೆ. ಇದೆಲ್ಲವನ್ನು ಗಮನಿಸುವಾಗ ಪ್ರಜ್ವಲ್ ಮುಂದೆ ಒಬ್ಬ ಪ್ರಖ್ಯಾತ ನಟನಾಗುವ ಎಲ್ಲ ಸಾಧ್ಯತೆಗಳೂ ಕಂಡು ಬರುತ್ತಿವೆ. ಈತನಲ್ಲಿರುವ ಪರಿಶ್ರಮ, ಶಿಸ್ತು, ಉತ್ಸಾಹ, ಸಾಧಿಸುವ ಛಲ, ನಯ-ವಿನಯತೆ ಮುಂತಾದವು ಇವನ ಬೆಳವಣಿಗೆಗೆ ಪೂರಕ ಅಂಶಗಳಾಗಿವೆ.
ಪ್ರೇಮ ಕಥೆಗಳ ಸಿನಿಮಾಗಳಿಗೆ ಸೂಕ್ತ ನಾಯಕ ಸಿಗದಿದ್ದರೆ ಯಶಸ್ಸು ಸಿಗುವುದಿಲ್ಲ. ಆದರೆ ಸೂಕ್ತ ನಾಯಕ ಸಿಕ್ಕಿದರೆ ಹೇಗೆ ಯಶಸ್ಸು ಸಿಗುತ್ತದೆ ಎಂಬುದಕ್ಕೆ ರವಿಚಂದ್ರನ್ ಅವರ ಪ್ರೇಮಲೋಕ, ರಣಧೀರ, ಸಿದ್ದಲಿಂಗಯ್ಯರು ತನ್ನ ಪುತ್ರ ಮುರಳಿಯ ಮೂಲಕ ಮಾಡಿಸಿದ್ದ ಪ್ರೇಮಪರ್ವ, ದ್ವಾರಕೀಶ್ರವರ ವಿನೋದ್ ರಾಜ್ ನಟನೆಯ ಡ್ಯಾನ್ಸ್ ರಾಜ ಡ್ಯಾನ್ಸ್, ಸೂರಿ ನಿರ್ದೇಶನದ ವಿಜಯ್ ನಟನೆಯ ದುನಿಯಾ ಸಿನಿಮಾಗಳೆಲ್ಲ ಉತ್ತಮ ಸಾಕ್ಷಿ. ಮುಂದೆ ಈ ಸಾಲಿಗೆ ಅಥರ್ವ ಸಿನಿಮಾ ಕೂಡ ಸೇರುವುದು ಖಚಿತ.
ಚಾಲಿಪೋಲಿಲು ಸಿನಿಮಾದಲ್ಲೇ ಗಮನ ಸೆಳೆದಿದ್ದ ತುಳು ಚಿತ್ರರಂಗದಲ್ಲಿ ಹಲವು ಹೊಸ ದಾಖಲೆಗಳನ್ನು ಮಾಡಿದ್ದ ಚಾಲಿಪೋಲಿಲು ಸಿನಿಮಾದಲ್ಲಿ ಬಾಲಕ ದಾಮುವಿನ ಪಾತ್ರವನ್ನು ಇದೇ ಪ್ರಜ್ವಲ್ ಮಾಡಿದ್ದ. ಅದರಲ್ಲೇ ಈತನಲ್ಲಿರುವ ನಟನಾ ಕೌಶಲ ಗಮನ ಸೆಳೆದಿತ್ತು. ಮುಂದೆ ಮಲಯಾಳದ ಖ್ಯಾತ ಗುರುವೋರ್ವರನ್ನು ಮಂಗಳೂರಿಗೆ ಕರೆಸಿಕೊಂಡು ಅಭಿನಯದ ತರಬೇತಿ ಪಡೆದುಕೊಂಡಿರುವ ಪ್ರಜ್ವಲ್ ಈಗ ಎಲ್ಲ ಖ್ಯಾತ ನಿರ್ದೇಶಕರ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದು ನಿಂತಿರುವುದು ನಮಗೆಲ್ಲ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಬಾಲಿವುಡ್ ಸಹಿತ ದೇಶದ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿರುವ ಕರಾವಳಿಗರ ಮಧ್ಯೆ ಈ ಹುಡುಗ ಮುಂದೆ ದೇಶಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂದು ಮಂಗಳೂರು ಹಿರಿಯ ಪತ್ರಕರ್ತ ಜಗನ್ನಾಥಾ ಶೆಟ್ಟಿ ಬಾಳ ಹಾರೈಸಿದ್ದಾರೆ.
