ಮುಂಬಯಿ : ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ವಡಾಲ ಕತ್ರಾಕ್ ರಸ್ತೆಯ ದ್ವಾರಕನಾಥ್ ಭವನದ ಶ್ರೀರಾಮ ಮಂದಿರದಲ್ಲಿ ಎ.೨೧ ರಂದು ಬುಧವಾರ ೫೬ನೇ ವಾರ್ಷಿಕ ಶ್ರೀ ರಾಮ ನವಮಿಯನ್ನು ಬಹಳ ಸರಳವಾಗಿ ಆಚರಿಸಲಾಯಿತು.
ರಾಮನಾಮ ಸಂಕೀರ್ತನೆಯೊಂದಿಗೆ ಎಂದಿನಂತೆ ಪೂರ್ವಸಿದ್ಧತೆ ನಡೆಸಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವಸರಳವಾಗಿ ಸಂಭ್ರಮಿಸಲಾಗಿದ್ದು ರಾಮ ನವಮಿ ಪ್ರಯುಕ್ತ ಮುಂಜಾನೆಯಿಂದ ಪ್ರಧಾನ ಆರ್ಚಕ ವೇದಮೂರ್ತಿ ಗೋವಿಂದ ಆಚಾರ್ಯ ತನ್ನ ಸಾರತ್ಯದಲ್ಲಿ ದೇವತಾ ಪ್ರಾರ್ಥನೆ, ಮಹಾ ಮಂಗಳಾರತಿ, ರಾತ್ರಿಪೂಜೆಯೊಂದಿಗೆ ವಾರ್ಷಿಕ ಉತ್ಸವ ನೆರವೇರಿಸಿದರು ಹಾಗೂ ಶ್ರೀರಾಮನ ಉತ್ಸವಮೂರ್ತಿಯನ್ನೇ ಈ ಬಾರಿ ತೊಟ್ಟಿಲ್ಲರಿಸಿ ನಾಮಕರಣೋತ್ಸವ ನೆರವೇರಿಸಿ ಸಾಂಪ್ರದಾಯಿಕವಾಗಿ ರಾಮ ಜನ್ಮೋತ್ಸವ ಸಂಭ್ರಮಿಸಿದರು.
ವೇ| ಮೂ| ಸುಧಾಮ ಭಟ್, ವೇ| ಮೂ| ಅನಂತ ಭಟ್, ವೇ| ಮೂ| ಭರತೇಶ್ ಭಟ್ ಕಟಪಾಡಿ, ಸಹ ಪುರೋಹಿತರು ಮತ್ತು ಮಂದಿರದ ವೈಧಿಕರು ವಿವಿಧ ಪೂಜೆಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಶ್ರೀ ರಾಮ ಮಂದಿರ ಸಮಿತಿ ವಡಾಲ ಇದರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಂದಿರದ ಮಹಿಳಾ ಭಕ್ತೆಯರು, ರಾಮಭಕ್ತರು ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರ ವಾರ್ಷಿಕ ಶ್ರೀ ರಾಮೋತ್ಸವಕ್ಕೆ ಸಿದ್ಧತೆ ನಡೆಸಿದ್ದು ಈ ಬಾರಿ ತೀರಾ ಸರಳವಾಗಿ ರಾಮ ನವಮಿ ಆಚರಿಸಿದರು.
ಈ ಸಂದರ್ಭದಲ್ಲಿ ಜಿ.ಎಸ್ ಬಿ ಸೇವಾ ಮಂಡಲ ಕಿಂಗ್ಸರ್ಕಲ್ ಇದರ ಮುಖ್ಯಸ್ಥ ಸತೀಶ್ ರಾಮ ನಾಯಕ್, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿ ಕಾರ್ಯಾಧ್ಯಕ್ಷ ಮುಕುಂದ್ ವೈ.ಕಾಮತ್, ಉಪ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್, ಜೊತೆ ಕೋಶಾಧಿಕಾರಿ ಪ್ರವೀಣ್ ಕಾಮತ್, ಮಹೇಶ್ ಭಂಡಾರ್ಕರ್, ಕಮಲಾಕ್ಷ ಜಿ.ಸರಾಫ್, ಹರೀಶ್ಚಂದ್ರ ಶ್ಯಾನ್ಭಾಗ್, ಅನ್ಮೋಲ್ ನಾಯಕ್ ಸೇರಿದಂತೆ ಕೆಲವೇ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ವಿವಿಧ ಸೇವೆಗಳನ್ನು ನೆರವೇರಿಸಿದ್ದು ವರ್ಷಂಪ್ರತಿಯಂತೆ ಈ ಬಾರಿಯೂ ಶ್ರೀ ರಾಮೋತ್ಸವವನ್ನು ಧಾರ್ಮಿಕಾನುಸಾರ ಸೇವೆ ಹಾಗೂ ಪೂಜಾವಿಧಿಗಳೊಂದಿಗೆ ಆಚರಿಸಲಾಯಿತು.

