ಕೈಕಂಬ : ಗುರುಪುರ ಮಾಣಿಬೆಟ್ಟುವಿನ ಮಾಣಿಬೆಟ್ಟುಗುತ್ತು ದಿ. ಯಜಮಾನ ಜಯರಾಮ ಶೆಟ್ಟಿಯವರ ಮನೆಯಲ್ಲಿ ಪುತ್ರರಾದ ವಿನಯ ಕುಮಾರ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಬುಧವಾರ ಪ್ರದರ್ಶನಗೊಂಡ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರ `ಮಧುರ ಮಹೀಂದ್ರ’ ಕಾಲಮಿತಿ ಯಕ್ಷಗಾನದ ಸಂದರ್ಭದಲ್ಲಿ ತಂಡದ ಕಲಾವಿದ ಮಾಧವ ಕೊಳ್ತಮಜಲು ಮತ್ತು ಕಾಂಗ್ರೆಸ್ ಮುಂದಾಳು ಜಯಶೀಲ ಅಡ್ಯಂತಾಯ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಕ್ಕುತ್ತರವಾಗಿ ಮಾಧವ ಕೊಳ್ತಮಜಲು ಮಾತನಾಡಿ, ಕಲಾವಿದರನ್ನು ಗುರುತಿಸಿ ಗೌರವಿಸುವ ಪರಂಪರೆ ಮುಂದುವರಿಯಲಿ. ಕಲಾವಿದರಿಗೆ ಸನ್ಮಾನವೆಂದರೆ, ಅದು ದೇವರಿಗೆ ಸಂದಾಯವಾಗುವ ಗೌರವ ಎಂಬುದು ನನ್ನ ಅನಿಸಿಕೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಮನುಷ್ಯರಲ್ಲಿ ಕೃತಜ್ಞತಾ ಭಾವವೆಂಬುದು ಇರಬೇಕು. ಅದಿಲ್ಲದೆ ಹೋದಲ್ಲಿ ಮಾನವ ಜೀವನ ಸಾರ್ಥಕವಾಗದು. ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಗುರುಪುರದ ಪ್ರತಿಯೊಂದು ಗುತ್ತಿನಲ್ಲಿ ಪಾವಂಜೆ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಯಾಗಿ ಜ್ಞಾನಶಕ್ತಿ ಹೆಚ್ಚಲಿ ಎಂದರು.
ವೇದಿಕೆಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ತಾಪಂ ಸದಸ್ಯ ಜಿ. ಸುನಿಲ್, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ಪಾವಂಜೆ ಯಕ್ಷಗಾನ ಮಂಡಳಿಯ ಯಜಮಾನರೂ ಆಗಿರುವ ಭಾಗವತ ಪಟ್ಲ ಸತೀಶ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಸನ್ಮಾನಿತರ ಅಭಿನಂದನಾ ಭಾಷಣಗೈದರು. ಸ್ವಾಗತಿಸಿ, ನಿರೂಪಿಸಿದ ವಿನೋದ್ ಬರ್ಕೆ ವಂದಿಸಿದರು.
