ಮೂಡುಬಿದಿರೆ: ಕೋಟಿ ಚೆನ್ನಯರೆಂದರೆ ಕೇವಲ ದೈವಿಕ ಶಕ್ತಿ ಅಲ್ಲ. ಅವರು ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬ, ತ್ಯಾಗ ಬಲಿದಾನದ ಸಂಕೇತವಾಗಿದ್ದಾರೆ. ತುಳುನಾಡು ಮಾತ್ರವಲ್ಲದೆ ಮಡಿಕೇರಿ, ಕಾಸರಗೋಡಿನಲ್ಲು ಗರಡಿಗಳನ್ನು ಸ್ಥಾಪಿಸಿ ಸಾಮರಸ್ಯ ಮೆರೆದಿದ್ದಾರೆ.
ಆದ್ದರಿಂದ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳು ನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕೆಂಬ ಜನಾಭಿಪ್ರಾಯಕ್ಕೆ ನನ್ನ ಬೆಂಬಲ ಇದೆ ಎಂದು ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವಿಷಯದಲ್ಲಿ ಜನಾಭಿಪ್ರಾಯಕ್ಕೆ ಸ್ಪಂದಿಸಿ ನಾನು ಸೇರಿದಂತೆ ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಂಸದರು ಸೇರಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅದನ್ನು ಸಚಿವ ಸಂಪುಟಕ್ಕಿಟ್ಟು ಅನುಮೋದನೆ ಪಡೆದ ಬಳಿಕ ಮುಂದಿನ ಕ್ರಮಕ್ಕಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಮುಂದುವರಿಯಲು ನಾವು ಸರಕಾರದ ಮೇಲೆ ಒತ್ತಡ ಹೇರಿದ್ದೇವೆ.
ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ನಾಮಕರಣ ಮಾಡಲು ಜಿಲ್ಲೆಯ ಜನ ಜಾತಿ ಮತ ಮರೆತು ಹೋರಾಟ ನಡೆಸಿದಾಗ ಹೆಚ್ಚಿನ ಬೆಂಬಲ ಸಿಗುತ್ತದೆ ಎಂದು ಹೇಳಿದರು.
