ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಮಂತರ ಮನೆಗಳಲ್ಲಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ವೇಳೆ ಬಂಧಿಸಲಾದ ಐವರು ದರೋಡೆಕೋರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳಾದ ಮಡಿಕೇರಿ ಕುಶಾಲನಗರ ನಿವಾಸಿಗಳಾದ ಆಸಿಫ್ ರಹಿಮಾನ್, ಶರೀಫ್, ಅಝೀಜ್, ಪುತ್ತೂರು ನಿವಾಸಿ ಅಬ್ದುಲ್ ರಹಿಮಾನ್, ಪುರಂದರ ನಾಯ್ಕ ಎಂಬವರು ವಿಟ್ಲ ಪರಿಸರದಲ್ಲಿ ಒಂಟಿ ಮನೆಗಳಲ್ಲಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ವೇಳೆ ವಿಟ್ಲ ಪೊಲೀಸ್ ಹಾಗೂ ಡಿಸಿಐಬಿ ಪೊಲೀಸ್ ತಂಡ ಕೇಪು ಎಂಬಲ್ಲಿ ಬಂಧಿಸಿ ಮಾರುತಿ ಒಮ್ನಿ ಕಾರು, ಮೆಣಸಿನಹುಡಿ, ಮಾಸ್ಕ್, ಮೂರು ತಲವಾರು, ಒಂದು ಚೂರಿ, ಐದು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದರು.
ದರೋಡೆಕೋರರು ಈ ಹಿಂದೆ ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮನೆ ಹಾಗೂ ಫೈನಾನ್ಸ್ ದರೋಡೆಗೆ ವಿಫಲ ಯತ್ನ ನಡೆಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸುವುದು ಸ್ವಲ್ಪವೇ ವಿಳಂಬವಾಗಿದ್ದರೂ ವಿಟ್ಲ ಪರಿಸರದಲ್ಲಿ ದರೋಡೆ ನಡೆಯುವುದು ನಿಶ್ಚಿತವಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
