ಗುರುಪುರ : ಗುರುಪುರ ಗ್ರಾಮ ಪಂಚಾಯತ್‌ನ ಬಂಗ್ಲೆಗುಡ್ಡೆಯಲ್ಲಿ ವ್ಯಾಪ್ತಿ ಪ್ರದೇಶದ ಜಿಪಂ, ತಾಪಂ ಹಾಗೂ ಪಂಚಾಯತ್ ಸದಸ್ಯರ ಪ್ರಯತ್ನದ ಫಲವಾಗಿ ನಬಾರ್ಡ್ ಆರ್‌ಬಿಡಿಎಫ್ ೨೫ ಯೋಜನೆಯಡಿ ಬಿಡುಗಡೆಗೊಂಡ ೧೬ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಅ. ೨೮ರಂದು ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮತ್ತು ತಾಪಂ ಸದಸ್ಯ ಸಚಿನ್ ಅಡಪ ಶಿಲಾನ್ಯಾಸಗೈದರು.
ತಗ್ಗುಪ್ರದೇಶದಲ್ಲಿರುವ ಪ್ರಸಕ್ತ ಅಂಗನವಾಡಿಯಲ್ಲಿ ಮಳೆಗಾಲದಲ್ಲಿ ನೀರು ತುಂಬುತ್ತದೆ. ಪರಿಣಾಮ, ಮಕ್ಕಳಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ಪ್ರಯತ್ನದ ಫಲವಾಗಿ ನಬಾರ್ಡ್ನಿಂದ ದೊಡ್ಡ ಮೊತ್ತದ ಅನುದಾನ ಬಿಡುಗಡೆಯಾಗಿದೆ ಎಂದು ಯು ಪಿ ಇಬ್ರಾಹಿಂ ಹೇಳಿದರು.
ಇದೇ ವೇಳೆ ಮೂಳೂರು ಗ್ರಾಮದ ನಡುಗುಡ್ಡೆಯಿಂದ ಬಡಕರೆ ಶ್ರೀ ಕರ‍್ದಬ್ಬ ದೈವಸ್ಥಾನದವರೆಗೆ ಜಿಪಂ ಮತ್ತು ತಾಪಂ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ರಸ್ತೆಯ ಪ್ರಥಮ ಹಂತದ ಕಾಮಗಾರಿಯನ್ನು ಜಿಪಂ ಸದಸ್ಯ ಯುವ ಪಿ ಇಬ್ರಾಹಿಂ ಮತ್ತು ದೈವಸ್ಥಾನದ ಪ್ರಮುಖ ರಾಮ ಮುಖಾರಿ ಜಂಟಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗುರುಪುರ ಗ್ರಾಪಂನ ನಿಕಟಪೂರ್ವ ಅಧ್ಯಕ್ಷೆ ರುಕಿಯಾ, ಮಾಜಿ ಸದಸ್ಯರಾದ ಸದಾಶಿವ ಶೆಟ್ಟಿ ಕೆ, ಶೋಭಾ, ಉಮೈ ಭಾನು, ಹಸನ್ ಬಾವ, ಅಝೀಝ್, ದಾವೂದ್, ಜಗದೀಶ ಪೂಜಾರಿ ಬಡಕರೆ, ಚರ್ವತ್ ಹಮೀದ್ ಅಂಗನವಾಡಿ ಶಿಕ್ಷಕಿ ರೂಪಾ ಹಾಗೂ ನಿತಿನ್ ಕುಳವೂರು, ಗಣೇಶ್ ಕೊಟ್ಟಾರಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
