ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಗುಡ್ಡೆ ಮೂಳೂರು ಸೈಟ್ ನಂಬ್ರ 133ರಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಜು. 20ರಂದು ಗುರುಪುರ ಗ್ರಾಪಂ ಕಚೇರಿಯಲ್ಲಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.ಮನೆ ಕಳೆದುಕೊಂಡವರಿಗೆ ಈಗಾಗಲೇ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಕುಟುಂಬಕ್ಕೆ ಮಾಸಿಕ 2,500 ರೂ ಬಾಡಿಗೆ ನೀಡಲಾಗುತ್ತದೆ. ಲಾಕ್‍ಡೌನ್ ಅವಧಿ ಮುಗಿದ ಬಳಿಕ ಸುರತ್ಕಲ್ ಎನ್‍ಐಟಿಕೆ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ, ಗುಡ್ಡದ ಧಾರಣಾಶಕ್ತಿ ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ. ಆ ಬಳಿಕ ಗುಡ್ಡದಲ್ಲಿರುವ ಇತರ ಮನೆಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.20vptashildar

ಇತ್ತೀಚೆಗೆ ಸಂಭವಿಸಿದ ಗುಡ್ಡ ಕುಸಿತ ಮತ್ತು ಮಕ್ಕಳಿಬ್ಬರ ಸಹಿತ ಎರಡು ಮನೆಗಳು ಧರಾಶಾಯಿಯಾಗಿರುವ ಭೀಕರ ದುರಂತದ ಬಳಿಕ ಸೈಟ್‍ನಲ್ಲಿ ಪದೇಪದೇ ಗುಡ್ಡ ಕುಸಿತದ ಭೀತಿ ಉಂಟಾಗಿದ್ದು, ಈಗಾಗಲೇ ಕೆಲವು ಮನೆಯವರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿನ ಕುಟುಂಬಗಳಿಗೆ ಹತ್ತಿರದ ನೀರುಮಾರ್ಗ ಗ್ರಾಮ ಪಂಚಾಯತ್‍ನ ಬೊಂಡಂತಿಲ ಗ್ರಾಮದಲ್ಲಿರುವ 20.6 ಎಕ್ರೆ ಸರ್ಕಾರಿ ಗೋಮಾಳ ಜಾಗದಲ್ಲಿ ಮನೆ ನಿರ್ಮಿಸಿ ಕೊಡಲು ಕಂದಾಯ ನಿರೀಕ್ಷಕರು, ಉಪ-ತಹಶೀಲ್ದಾರ್ ಸಹಿತ ಜನಪ್ರತಿನಿಧಿಗಳು ಸಮೀಕ್ಷೆ ನಡೆಸಿದ್ದರು. ಇದೀಗ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಅಥವಾ ಅಡ್ಡೂರು ಗ್ರಾಮದಲ್ಲಿ ಸರ್ಕಾರಿ ಖಾಲಿ ಜಾಗ ಗುರುತಿಸಲು ಉಪ-ತಹಶೀಲ್ದಾರರಿಗೆ ಸೂಚಿಸಿದ್ದೇನೆ. ವರದಿಯನ್ನಾಧರಿಸಿ ನಿರಾಶ್ರಿತರಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಗುರುಪ್ರಸಾದ್ ಹೇಳಿದರು.

ಬೊಂಡಂತಿಲ ಗ್ರಾಮದಲ್ಲಿ ಗುರುಪುರದ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು ಗುರುತಿಸಲಾದ ಸರ್ಕಾರಿ ಗೋಮಾಳ ಜಾಗದ ಹಿನ್ನೆಲೆಯಲ್ಲಿ ನೀರುಮಾರ್ಗ ಗ್ರಾಪಂನ ನಿರಾಶ್ರಿತರಿಂದ ವಿರೋಧ ವ್ಯಕ್ತವಾಗಿದೆ. ಇಷ್ಟಿದ್ದರೂ, ಬೊಂಡಂತಿಲ ಗ್ರಾಮದ ಗೋಮಾಳ ಜಾಗದ ಪ್ರಸ್ತಾವ ಕೈಬಿಟ್ಟಿಲ್ಲ. ಸದ್ಯ ಆ ಜಾಗವನ್ನೂ ಪರಿಗಣನೆಯಲ್ಲಿಟ್ಟುಕೊಂಡು ಅಡ್ಡೂರು ಮತ್ತು ಮೂಳೂರು ಗ್ರಾಮದಲ್ಲಿ ಖಾಲಿ ಇರುವ ಸರ್ಕಾರಿ ಜಾಗಗಳ ಗುರುತಿಸಲು ಸೂಚನೆ ಸಿಕ್ಕಿದೆ ಎಂದು ಉಪ-ತಹಶೀಲ್ದಾರ್ ಶಿವಪ್ರಸಾದ್ ತಿಳಿಸಿಸದರು.

ಸಭೆಯಲ್ಲಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಪಿಡಿಒ ಅಬೂಬಕ್ಕರ್, ಸದಸ್ಯರಾದ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *