ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಮದುವೆ ಸಮಾರಂಭದ ನಿಮಿತ್ತ ನಡೆದ ಕಾರ್ಯಕ್ರಮವೊಂದರಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಗುಂಪು ಸೇರಿ ಧ್ವನಿ ವರ್ಧಕಗಳನ್ನು ಬಳಸಿ ಸಾಮೂಹಿಕವಾಗಿ ಯುವಕರು ನೃತ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಂದೆ- ಮಗನ ವಿರುದ್ದ ಕೇಸ್ ದಾಖಲಾಗಿದೆ.
ಶಿವಪ್ಪ ಪೂಜಾರಿ ಮತ್ತುವರ ಮಗ ತಿಲಕ್ ರಾಜ್ ಎಂಬವರ ವಿರುದ್ದ ಕೇಸು ದಾಖಲಾಗಿದ್ದು ,ಮುಂದಿನ ತನಿಖೆ ನಡೆಯುತ್ತಿದೆ. ಜು.1 ರಂದು ಬಂಟ್ವಾಳ ಅಮ್ಮುಂಜೆ ಗ್ರಾಮದ ಶಿವಪ್ಪ ಪೂಜಾರಿ ಎಂಬವರ ಮನೆಯಲ್ಲಿ ಮಗ ತಿಲಕ್ ರಾಜ್ ಎಂಬಾತನ ಮದುವೆ ಹಿನ್ನೆಲೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಲಾಕ್ಡೌನ್ ನಿಯಮಗಳ ಉಲ್ಲಂಘಿಸಿ ಡಿಜೆ ಹಾಕಿ ಯುವಕರ ಗುಂಪು ಸಾಮೂಹಿಕವಾಗಿ ನೃತ್ಯ ಮಾಡಿದ್ದು,ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತನಿಖೆಗೆ ಆದೇಶಿಸಿದ್ದರು. ಆನಂತರ ಠಾಣೆಯ ಪೊಲೀಸರು ನಡೆಸಿದ ತನಿಖೆಯಲ್ಲಿ ಇದು ದೃಢ ಪಟ್ಟ ಹಿನ್ನಲೆಯಲ್ಲಿ ತಂದೆ ಮಗನ ಮೇಲೆ ರವಿವಾರ ರಾತ್ರಿ ಕೇಸು ದಾಖಲಾಗಿದೆ.
