ಕೈಕಂಬ : ಆಯುಷ್ ಇಲಾಖೆ ಒದಗಿಸರುವ ಈ ಮಾತ್ರೆಗಳು ನಿರ್ದಿಷ್ಟ ಗುಣಮಟ್ಟದಲ್ಲಿವೆ. ಇದು ರೋಗ ನಿರೋಧಕ ಚಿಕಿತ್ಸಾ ಮಾತ್ರೆಗಳಾಗಿದ್ದು, ಇದನ್ನು ಮನೆಯಲ್ಲೂ ಸಿದ್ಧಪಡಿಸಬಹುದು. ಆದರೆ ಬಳಸುವ ವಸ್ತುಗಳ ಪ್ರಮಾಣ ಹೆಚ್ಚುಕಡಿಮೆಯಾಗಬಹುದು ಎಂದು ಕೈಕಂಬದ ಡಾ. ಶ್ರೀದೇವಿ ಹೇಳಿದರು. ಅವರು ಆಯುಷ್ ಫೆಡರೇಶನ್ ಆಫ್ ಇಂಡಿಯಾ(ದ.ಕ, ಮಂಗಳೂರು) ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಬಜ್ಪೆ ಪೊಲೀಸ್ ಠಾಣೆಯಲ್ಲಿ ಆಯುಷ್ ರೋಗರಕ್ಷಕ ಮಾತ್ರೆಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮತಾನಾಡಿದರು.
ಆಯುಷ್ ಇಲಾಖೆ(ದ,ಕ) ಅಧಿಕಾರಿ ಡಾ. ಅಜಿತ್ ಮಾತನಾಡಿ, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಾಯಿಲೆ ಬರದಂತೆ ಆರೋಗ್ಯ ರಕ್ಷಿಸಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಕೊರೊನಾ ವಾರಿಯರ್ಸ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರಿಗೆ ಆಯುಷ್ ಇಲಾಖೆ ವಿತರಿಸುವ ಆಯುಷ್ ಇಮ್ಯೂನಿಟಿ ಮಾತ್ರೆ ಮತ್ತು ಆಯುಷ್ ಕ್ವಾಥ ಮಾತ್ರೆಗಳು ಪ್ರಯೋಜನಕಾರಿಯಾಗಿವೆ. ಇದರೊಟ್ಟಿಗೆ ಎಲ್ಲ ವರ್ಗದವರಿಗೆ ಚ್ಯವನಪ್ರಾಶ ತೆಗೆದುಕೊಳ್ಳಬಹುದು. ಇವೆಲ್ಲವೂ ರೋಗ ಪ್ರತಿರೋಧಕ ಮತ್ತು ಇಮ್ಯುನಿಟ್ ಶಕ್ತಿ ಹೆಚ್ಚಿಸುವ ಔಷಧಿಗಳಾಗಿವೆ. ಜಿಲ್ಲೆಯಲ್ಲಿ 15 ಆಯುಷ್ ಆಸ್ಪತ್ರೆಗಳಿದ್ದು, ಸುಮಾರು 750 ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದರು.
.ಬಜ್ಪೆ ವೃತ್ತ ನಿರೀಕ್ಷಕ ಕೆ ಆರ್ ನಾಯ್ಕ್, ಪಿಎಸ್ಐಗಳಾದ ಎಂ ಪಿ ಸತೀಶ್, ರಾಘವೇಂದ್ರ, ಕಮಲಾ ಸಹಿತ ಸುಮಾರು 65 ಮಂದಿ ಪೊಲೀಸ್ ಸಿಬ್ಬಂದಿಗೆ ಆಯುಷ್ ಮಾತ್ರೆ ವಿತರಿಸಲಾಯಿತು.
ಡಾ. ಶ್ರೀಪತಿ ಕಿನ್ನಿಕಂಬಳ, ಡಾ. ಗಾಡ್ವಿನ್ ಲೋಬೊ ಕೈಕಂಬ, ಡಾ. ರವಿಚಂದ್ರ ಗಂಜಿಮಠ, ಡಾ. ಯೋಗೀಶ್ ತಂತ್ರಿ ಗುರುಪುರ ಉಪಸ್ಥಿತರಿದ್ದರು. ಡಾ.ಶ್ರೀ ದೇವಿ ಸ್ವಾಗತಿಸಿ ಪೊಲೀಸ್ ಹೆಡ್-ಕಾನ್ಸ್ಟೇಬಲ್ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

