ಕೈಕಂಬ: ಮಂಗಳೂರು-ಮೂಡಬಿದ್ರೆ ಹೆದ್ದಾರಿಯಲ್ಲಿರುವ ಪೊಳಲಿ ದ್ವಾರದ ಸಮೀಪ ಅಪರಿಚತ ವಾಹನವೊಂದು ಬೈಕ್ನಲ್ಲಿ ಹೋಗುತ್ತಿದ್ದ ಪಾಂಡೇಶ್ವರ ನಿವಾಸಿ, ಯುವ ವೈದ್ಯ ಡಾ. ಹರ್ಷವರ್ಧನರಿಗೆ ಡಿಕ್ಕಿ ಹೊಡೆದ ಘಟನೆ 2013ರ ಜುಲೈ 19ರಂದು ಬೆಳಿಗ್ಗೆ ನಡೆದಿತ್ತು. ಆದರೆ ಯುವವೈದ್ಯರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ ಯಾವುದೆಂಬುವುದನ್ನು ತಿಳಿಯಲು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.
ಈ ಘಟನೆ ನಡೆದು ಸರಿಯಾಗಿ ಒಂದೂವರೆ ವರ್ಷವಾಗುತ್ತಾ ಬಂದಿದೆ. ಆದರೂ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.

ಹರ್ಷವರ್ಧನ್ ತನ್ನ ಮೂವರು ಗೆಳೆಯರೊಂದಿಗೆ ಗಂಜಿಮಠದಲ್ಲಿರುವ ತನ್ನ ಗೆಳೆಯನ ಮನೆಗೆ ಹೋಗಿದ್ದರು. ಶುಕ್ರವಾರ ಮುಂಜಾನೆ ತನ್ನ ಮೂವರು ಗೆಳೆಯರು ಕಾರ್ನಲ್ಲಿ ಹೊರಟರೆ ಹರ್ಷವರ್ಧನ್ ತನ್ನ ಬೈಕ್ನಲ್ಲಿ ತೆರಳಿದ್ದರು. ಈ ವೇಳೆ ಪೊಳಲಿ ದ್ವಾರದ ಸಮೀಪದ ಬಂಗ್ಲೆಗುಡ್ಡೆ ಕ್ರಾಸ್ ಬಳಿ ಅವರ ಬೈಕ್ಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿಹೊಡೆದು ಪರಾರಿಯಾಗಿತ್ತು. ನೆಲಕ್ಕೆ ಬಿದ್ದಿದ್ದ ವೈದ್ಯ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಕೆಎಂಸಿ ಹಾಗೂ ಎಜೆ ಆಸ್ಪತ್ರೆಯಲ್ಲಿ ಯುವವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಇಂದು ಬದುಕಿರುತ್ತಿದ್ದರೆ ಹೆಸರಾಂತ ವೈದ್ಯರಾಗಿರುತ್ತಿದ್ದರು.
ಯುವವೈದ್ಯರಿಗೆ ಡಿಕ್ಕಿ ಹೊಡೆದ ವಾಹನ ದನಕಳ್ಳರದ್ದು ಎಂಬ ಸಂಶಯ ಇನ್ನೂ ಹೋಗಿಲ್ಲ. ಯಾಕೆಂದರೆ ಈ ಭಾಗದಲ್ಲಿ ದನಳ್ಳರು ಸಕ್ರಿಯವಾಗಿದ್ದು, ರಾತ್ರಿ ವೇಳೆ ಹಸುಗಳನ್ನು ಕದ್ದುಕೊಂಡು ಮಂಗಳೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಈ ಘಟನೆ ನಡೆದ ಸಂದರ್ಭದಲ್ಲಿ ಇಲ್ಲಿನವರ ಹಸುಗಳು ಕಣ್ಮರೆಯಾದ ಘಟನೆಯೂ ನಡೆದಿತ್ತು.
ಪೊಲೀಸ್ ಠಾಣೆಯಲ್ಲಿ ಅಪರಿಚಿತ ವಾಃನ ಡಿಕ್ಕಿ ಹೊಡೆದ ಸಾವು ಎಂದು ಕೇಸಿನ ಫೈಲ್ ಮಾಡಲಾಗಿದೆ. ಆನಂತರದ ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿಲ್ಲ.
ಈ ಪ್ರಕರಣವನ್ನು ಕೊಲೆ ಪ್ರಕರಣವೆಂದು ಬದಲಾಯಿಸಿ ಮರುತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಬೇಕೆಂಬ ಒತ್ತಾಯವೂ ಕೇಳಿಬಂದಿದೆ.
