ವಾಮಂಜೂರು : ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಜೂ.15 ರಂದು ಸೋಮವಾರ ಒಂದು ನೂತನ ಕಾಂಕ್ರೀಟ್ ರಸ್ತೆ, ಒಂದು ಡಾಮರೀಕರಣ ರಸ್ತೆ ಉದ್ಘಾಟಿಸಿದ ಬಳಿಕ ಮೂರು ರಸ್ತೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು.
1.39 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮೂಡುಶೆಡ್ಡೆಯ ಎದುರುಪದವು-ಪಿಲಿಕುಳ ಕಾಂಕ್ರೀಟ್ ರಸ್ತೆ ಹಾಗೂ ಮೂಡುಶೆಡ್ಡೆ-ಬೋಂದೆಲ್ ರಸ್ತೆ(ಅಗಲೀಕರಣ ಮತ್ತು ಡಾಮರೀಕರಣ) ಉದ್ಘಾಟಿಸಿ ಮಾತನಾಡಿದ ಶಾಸಕ ಕೋಟ್ಯಾನ್, ಈ ಎರಡು ಕಾಮಗಾರಿ ಪೂರ್ಣಗೊಳಿಸುವಲ್ಲಿ ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂ. ಆಡಳಿತ ಮತ್ತು ಗುತ್ತಿಗೆದಾರರಾದ ಸುರತ್ಕಲ್ ಹುಸೇನ್ ಎಂ ಜಿ ಹಾಗೂ ಮೊಗರೋಡಿ ಕನ್‍ಸ್ಟ್ರಕ್ಷನ್ ಅತೀವ ಮುತುವರ್ಜಿ ವಹಿಸಿದ್ದಾರೆ. ಹೊಸ ರಸ್ತೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ನಾಗರಿಕರಿಗೆ ಸಂಚಾರ ಸುಗಮವಾಗಲಿದೆ. ಯಾವುದೇ ಕಾರಣಕ್ಕೆ ಈ ರಸ್ತೆ(ಪಿಲಿಕುಳಕ್ಕೆ ಸಂಪರ್ಕ) ಬಂದ್ ಆಗಬಾರದು ಎಂದುಕೊಂಡಿರುವ ನಿಮ್ಮ ಭಾವನಗಳಿಗೆ ಧಕ್ಕೆಯಾಗದಂತೆ ಕೆಲಸ ಮಾಡಿದ್ದೇನೆ ಎಂದರು.
ಬಳಿಕ ಮಳೆಹಾನಿ ಕೋಟಾದಡಿಯ 10 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ, 10 ಲಕ್ಷ ರೂ ವೆಚ್ಚದ ಮೂಡುಶೆಡ್ಡೆ ಶಿವನಗರ ಮುಖ್ಯರಸ್ತೆ ಕಾಂಕ್ರೀಟೀಕರಣ, 10 ಲಕ್ಷ ರೂ ವೆಚ್ಚದ ಜಾರದ ಜಾರಂದಾಯ ದೈವಸ್ಥಾನ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.
ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ತಾಪಂ ಸದಸ್ಯೆ ಕವಿತಾ ದಿನೇಶ್, ಮೂಡುಬಿದ್ರೆ ಮಂಡಲ ಬಿಜೆಪಿ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ಗ್ರಾಪಂ ಸದಸ್ಯರಾದ ಗೋಪಾಲ ಮಡಿವಾಳ, ಮೋಹಿನಿ, ಗೀತಾ, ಯುವರಾಜ್, ಬಿಜೆಪಿ ಮುಖಂಡರಾದ ರಮಾನಾಥ ಅತ್ತರ್(ಚಿತ್ತಣ್ಣ), ಸುರೇಶ್ ಕೊಟ್ಟಾರಿ ಮತ್ತು ಉಮೇಶ್ ಜೆ ಮತ್ತಿತರರು ಇದ್ದರು.
