ಬಂಟ್ವಾಳ: ಇಲ್ಲಿಯ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಮುರದಮೇಲು ಎಂಬಲ್ಲಿನ 70 ರ ಹರೆಯದ ಗುಲಾಬಿ ಎನ್ನುವ ಬಡ ಒಂಟಿ ವೃದ್ದೆಗೆ ವಾಮದಪದವಿನ ನ್ಯಾಯಬೆಲೆ ಅಂಗಡಿಯೊಂದು ಪಡಿತರ ಅಕ್ಕಿ ವಿತರಣೆಯಲ್ಲಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಇಲ್ಲಿಯ ಶ್ರೀಧರ ಪೈ ಎಂಬವರ ನ್ಯಾಯಬೆಲೆ ಅಂಗಡಿಯಲ್ಲಿ ಈ ವರ್ಷದ ಮೊದಲ ಮೂರು ತಿಂಗಳು 7 ಹಾಗೂ ಕಳೆದೆರಡು ತಿಂಗಳು 10 ಕೆಜಿಯಂತೆ ಅಕ್ಕಿಯನ್ನು ವೃದ್ದೆಗೆ ವಿತರಿಸಿ ವಂಚಿಸಲಾಗಿದೆ ಎಂದು ಪಡಿತರ ವಂಚಿತ ವೃದ್ದೆ ಗುಲಾಬಿ ಅವರು ಮಂಗಳವಾರ ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರಿಗೆ ಲಿಖಿತ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಅನಕ್ಷರಸ್ಥೆ,ಬಡ ಒಂಟಿ ವೃದ್ದೆಯಾಗಿರುವ ಗುಲಾಬಿ ಅವರಿಗೆ ಗ್ರಾಪಂ ಅಂತ್ಯೋದಯ ಪಡಿತರವನ್ನ ನೀಡಿದೆ.ಕೊರೋನಾ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಪ್ರತಿ ಕುಟುಂಬಕ್ಕೆ ತಿಂಗಳಿಗೆ ತಲಾ 35 ಕೆ.ಜಿಯಂತೆ ಅಕ್ಕಿ ವಿತರಿಸಲು ಆದೇಶಿಸಿದ್ದು, ಆದರೆ ಈ ನ್ಯಾಯಬೆಲೆ ಅಂಗಡಿಯಲ್ಲಿ ವೃದ್ಧೆ ಗುಲಾಬಿಯವರ ಹೆಬ್ಬೆರಳ ಮುದ್ರೆ ಪಡೆದು 35 ಕೆಜಿ ಅಕ್ಕಿಯ ಬದಲು ಮೂರು ತಿಂಗಳು 7ಕೆ.ಜಿ,,ಎರಡು ತಿಂಗಳು 10 ಕೆ.ಜಿಯಂತೆ ವಿತರಿಸಿರುವ ಬಗ್ಗೆ ಪಡಿತರಚೀಟಿಯಲ್ಲಿ ಉಲ್ಲೇಖವಿದೆ. ಉಳಿದ ಅಕ್ಕಿಯನ್ನು ದುಪ್ಪಟ್ಟು ಹಣಕ್ಕೆ ಅಂಗಡಿಗೆ ಮಾರಾಟ ಮಾಡಿರಬೇಕೆಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
