ಬಂಟ್ವಾಳ:ಇಲ್ಲಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವುಂಡಿ ಎಂಬಲ್ಲಿ ಸಾರ್ವಜನಿಕ ತೋಡು ಅತಿಕ್ರಮಿಸಿ ನಿರ್ಮಾಣಗೊಂಡಿರುವ ತಡೆಗೋಡೆ ಕಾಮಗಾರಿ ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರಿಂದ ಆಗ್ರಹ ಕೇಳಿ ಬಂದಿದೆ.
ಕಳೆದ ಒಂದೂವರೆ ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯಡಿ ರೂ 3.5ಲಕ್ಷ ವೆಚ್ಚದಲ್ಲಿ ಪಂಚಾಯಿತಿ ವತಿಯಿಂದ ತಡೆಗೋಡೆ ಕಾಮಗಾರಿ ನಡೆದಿದೆ. ಇಲ್ಲಿನ ನಾಗರಿಕರ ಬೇಡಿಕೆಯಂತೆ ಈ ಕಾಮಗಾರಿ ಮುಂದುವರಿಸಲು ಸಣ್ಣ ನೀರಾವರಿ ಇಲಾಖೆಯಿಂದ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರು ರೂ 20ಲಕ್ಷ ಮೊತ್ತದ ಅನುದಾನ ಮಂಜೂರುಗೊಳಿಸಿದ್ದಾರೆ. ಇದೀಗ ಸ್ಥಳ ಪರಿಶೀಲನೆ ನಡೆಸದೆ ಏಕಾಯೇಕಿ ನಿರ್ಮಿಸಿದ ತಡೆಗೋಡೆ ಕಾಮಗಾರಿಗೆ ಸುಮಾರು 17.5 ಅಡಿ ವಿಸ್ತೀರ್ಣ ಉದ್ದಕ್ಕೆ ತೋಡು ಅತಿಕ್ರಮಣ ನಡೆದಿದೆ ಎಂದು ಆರೋಪಿಸಲಾಗಿದೆ.
ಇದರಿಂದಾಗಿ ತೋಡಿನ ಕೆಳಭಾಗದ ಹಲವು ಮನೆಗಳಿಗೆ ಮಳೆಗಾಲದಲ್ಲಿ ನೆರೆ ನೀರು ನುಗ್ಗಲಿದ್ದು, ಕೂಡಲೇ ಅತಿಕ್ರಮಣ ಮತ್ತು ಅರ್ಧಕ್ಕೆ ಸ್ಥಗಿತಗೊಳಿಸಿದ ತಡೆಗೋಡೆ ಕಾಮಗಾರಿ ತೆರವುಗೊಳಿಸಬೇಕು. ಈ ಅತಿಕ್ರಮಣ ಮತ್ತು ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದು, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೂಡಾ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ತರಾಟೆ:
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ಕುಮಾರ್, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಪ್ರಸನ್ನ, ಗುತ್ತಿಗೆದಾರ ಮಹಾಬಲ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ ಶೆಟ್ಟಿ ಪಡು, ಮಾಜಿ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಹಿರಿಯ ಸದಸ್ಯ ಶೇಖರ ಶೆಟ್ಟಿ, ಪಿಡಿಒ ಮಹಮ್ಮದ್ ಮತ್ತಿತರರು ಭೇಟಿ ಸೋಮವಾರ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
