ಬಂಟ್ವಾಳ: ಕೊರೋನಾ ವೈರಸ್ ತಡೆಗಟ್ಟುವ ದೆಸೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದರೂ,ಕಳ್ಳರಿಗೆ ಮಾತ್ರ ಇದು ಅನ್ವಯಿಸಿದಂತಿಲ್ಲ,ಮೆಲ್ಕಾರ್ ಸಮೀಪದ ಮಾರ್ನಬೈಲ್ ನಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.
ಈ ಕಾಲೇಜಿನಲ್ಲಿ ಮಾ. ೨೯ರಂದು ಸ್ಥಳೀಯರು ನೋಡಿದಾಗ ಬಾಗಿಲು ತೆರೆದಿದ್ದು, ಕಾಲೇಜಿನವರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಚೇರಿ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಕಪಾಟಿನ ಬಾಗಿಲು ತೆರೆದು ಚೆಲ್ಲಾಪಿಲ್ಲಿಗೊಳಿಸಿದ್ದಾರೆ.ಸಿಸಿ ಕ್ಯಾಮರಾ ಹಾಗೂ ಮಾನಿಟರ್ ಕಳವು ನಡೆಸಿದ್ದು, ಸೊತ್ತುಗಳ ಮೌಲ್ಯ ಸುಮಾರು ೨೦ ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
