ಬಂಟ್ವಾಳ: ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಬಲಪಡಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳ ಜೊತೆ ಎಲ್ಲಾ ಕಾರ್ಯಕರ್ತರು ಸಹಕರಿಸುವಂತೆ ಶಾಸಕ ರಾಜೇಶ್ ನಾಯ್ಕ್ ಕರೆ ನೀಡಿದ್ದಾರೆ.
ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷ ದೇವಪ್ಪ ಪೂಜಾರಿ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಯ ದೃಷ್ಟಿಯಿಂದ ಯಾವುದೇ ಸಮಸ್ಯೆಗಳಿದ್ದರೆ ನಾಯಕರ ಜೊತೆ ಚರ್ಚಿಸಿ ಅದರ ಪರಿಹಾರಕ್ಕೆ ಪ್ರಯತ್ನಿಸಬೇಕೆಂದರು.ಜಿಲ್ಲಾದ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ಕ್ಷೇತ್ರ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಬಿಜೆಪಿ ಧ್ವಜವನ್ನು ದೇವಪ್ಪ ಪೂಜಾರಿ ಅವರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದೇವಪ್ಪ ಪೂಜಾರಿ ಮಾತನಾಡಿ
, ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಈ ಜವಬ್ದಾರಿ ನೀಡುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ನನಗೆ ನೀಡಿರುವ ಈ ಜವಬ್ದಾರಿಯನ್ನು ಯಾವುದೇ ಚ್ಯುತಿ ಬಾರದಂತೆ ನಿರ್ವಹಿಸಿ ಪಕ್ಷವನ್ನು ಸಂಘಟಿಸುವುದಾಗಿ ಭರವಸೆಯಿತ್ತರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ರಾಮ್ ದಾಸ್ ಬಂಟ್ವಾಳ, ಕಸ್ತೂರಿ ಪಂಜ, ಸುದೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೇಶ್ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯಪೂಜಾರಿ , ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಬಂಟ್ವಾಳ ಬಿಜೆಪಿ ನಿಕಟಪೂರ್ವ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ಮತ್ತಿತರರು ವೇದಿಕೆಯಲ್ಲಿದ್ದರು. ಈ ಸಂದರ್ಭ ಪಕ್ಷದ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

