ಕೈಕಂಬ: ಕಂದಾವರ ಗ್ರಾಮ ಪಂಚಾಯತ್‍ನ 2019-2020ರ ಸಾಲಿನ ಎರಡನೇ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ) ಯೋಜನೆಯ `ಸಾಮಾಜಿಕ ಪರಿಶೋಧನಾ ಸಭೆ’ ಸೋಮವಾರ(ಫೆ. 17) ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ(ನೋಡೆಲ್ ಅಧಿಕಾರಿ) ಪ್ರಶಾಂತ್ ಕುಮಾರ್ ಕೆ ಎಸ್ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ನರೇಗಾ ಯೋಜನೆಯ ಮಂಗಳೂರು ತಾಲೂಕು ಹೆಚ್ಚುವರಿ ಸಂಯೋಜಕ ಹರೀಶ್ ಈ ಯೋಜನೆಯ ಉದ್ದೇಶ ಮತ್ತು ಸಾಧಕ-ಬಾಧಕಗಳ ಬಗ್ಗೆ ಫಲಾನುಭವಿಗಳಿಗೆ ಸಮಗ್ರ ಮಾಹಿತಿ ನೀಡುತ್ತ, ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಾಗಿರುವ ನಾಲ್ಕು ಪ್ರವರ್ಗವಾರು ಕಾಮಗಾರಿಗಳ ಮೊತ್ತದಲ್ಲಿ ಕಂಡು ಬಂದಿರುವ `ವ್ಯತ್ಯಾಸ’ಕ್ಕೆ ಪ್ರತಿಯಾಗಿ ಆಕ್ಷೇಪಣೆ ದಾಖಲಾಗಿದ್ದು, ಹೆಚ್ಚುವರಿ ಮೊತ್ತ ಪಡೆಯಲು ಕ್ರಮ ಜರುಗಿಸಲಾಗಿದೆ ಎಂದರು.
ಕಂದಾವರ ಗ್ರಾಮದಲ್ಲಿ 967, ಕೊಳಂಬೆಯಲ್ಲಿ 1,239 ಮತ್ತು ಆದ್ಯಪಾಡಿ ಗ್ರಾಮದಲ್ಲಿ 1,148 ಕುಟುಂಬಗಳಿದ್ದು, ಇದುವರೆಗೆ ಒಟ್ಟು 807 ಮಂದಿ ಉದ್ಯೋಗ ಚೀಟಿ ಮಾಡಿಸಿಕೊಂಡಿದ್ದು, ಇದರಲ್ಲಿ ಈಗ 234 ಚೀಟಿಗಳು ಸಕ್ರಿಯವಾಗಿವೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 65 ಕಾಮಗಾರಿಗಳು ನಡೆದಿದ್ದು, ಒಟ್ಟು 7.90 ಲಕ್ಷ ರೂ ಖರ್ಚಾಗಿದೆ ಎಂದವರು ಮಾಹಿತಿ ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಯಶವಂತ ಬೆಳ್ಚಡ ಸ್ವಾಗತಿಸಿ, ಪ್ರಸ್ತಾವಿಸುತ್ತ, ಗ್ರಾಮ ಹಾಗೂ ವಾರ್ಡು ಸಭೆಗಳಲ್ಲಿ ಗ್ರಾಮಸ್ಥರು ಕಡ್ಡಾಯವಾಗಿ ಪಾಲ್ಗೊಂಡು, ತಮ್ಮಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಫಲಾನುಭವಿಗಳಾಗಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಸುನೀತಾ ಮತ್ತು ಸವಿತಾ ಕಾಮಗಾರಿಗಳ ಮಾಹಿತಿ ನೀಡಿದರು. ಪಿಡಿಒ ಅನುಪಾಲನಾ ವರದಿ ಮಂಡಿಸಿದರು. ವೇದಿಕೆಯಲ್ಲಿ ಕಂದಾವರ ಗ್ರಾಪಂ ಉಪಾಧ್ಯಕ್ಷ ದೇವೇಂದ್ರ, ಕಂದಾವರ ಪಂಚಾಯತ್ ಕಾರ್ಯದರ್ಶಿ ಜಲಜಾಕ್ಷಿ ಮತ್ತಿತರರು ಇದ್ದರು.

