ನವದೆಹಲಿ : ಆರೋಗ್ಯ ನಿಧಿ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ತುಂಬಾ ಅಪರೂಪದ ಕಾಯಿಲೆಗಳಿಗೆ ತುತ್ತಾಗುವ ನಾಗರಿಕರಿಗೆ 15 ಲಕ್ಷ ರೂ. ಗಳವರೆಗಿನ ಒಂದು ಬಾರಿಯ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುವ ಮಹತ್ವದ ಪ್ರಸ್ತಾವನೆಗೆ ಮುಂದಾಗಿದೆ.
ಈ ಕುರಿತು ಕರಡು ಪ್ರತಿಯನ್ನು ಅರೋಗ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅಪರೂಪದ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ರಾಷ್ಟ್ರೀಯ ಆರೋಗ್ಯ ನಿಧಿ ಅಡಿಯಲ್ಲಿ 15 ಲಕ್ಷ ರೂ. ಗಳವರೆಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ನಾಗರಿಕರು ಫೆಬ್ರವರಿ 10 ರೊಳಗೆ ಸಲಹೆ, ಸೂಚನೆಗಳನ್ನು ಸಲ್ಲಿಸಲು ಅವಕಾಶವಿದೆ. ಇನ್ನು ಈ ಯೋಜನೆಯನ್ನು ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ದೇಶದ ಶೇ. 40 ರಷ್ಟು ಜನರಿಗೆ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

