ವಾಮಂಜೂರು : ಮೂಡುಶೆಡ್ಡೆಯ ಮೇಗಿನಮನೆ ಎಂಬಲ್ಲಿ ಶನಿವಾರ ಮುಂಜಾನೆ ಬೀಸಿದ ಬಿರುಗಾಳಿ ಮಳೆಗೆ ಮನೆಯೊಂದರ ಮೇಲೆ ಭಾರೀ ಗಾತ್ರದ ಗೋಳಿ ಮರ ಉರುಳಿ ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ.
ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಸೀತಾಲಕ್ಷ್ಮಿ ಶೆಟ್ಟಿ ಎಂಬವರ ಮನೆಗೆ ಮರ ಬಿದ್ದಿದೆ. ಮನೆ ಸಂಪೂರ್ಣ ಜಖಂಗೊಂಡಿರುವುದರಿಂದ ಅಂದಾಜು ಐದು ಲಕ್ಷ ರೂ ನಷ್ಟ ಸಂಭವಿಸಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಐದು ಮಂದಿ ನಿದ್ರಿಸುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಧಾವಿಸಿದ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ತಕ್ಷಣದ ಪರಿಹಾರವಾಗಿ 25,000 ರೂ ನೀಡುವಂತೆ ಹಾಗೂ ಇತರ ಪರಿಹಾರ ಮೊತ್ತ ಶೀಘ್ರ ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿ ವರ್ಗಕ್ಕೆ ಸೂಚಿಸಿದರು.ಶಾಸಕರೊಂದಿಗೆ ಕಂದಾಯ ನಿರೀಕ್ಷಕ(ಆರ್‍ಐ) ನವೀನ್, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೃಷಿಕ ರಮಾನಾಥ ಅತ್ತರ್(ಚಿತ್ತಣ್ಣ), ಸದಸ್ಯರಾದ ಉಮೇಶ್ ಜೆ, ಪ್ರಮೀಳಾ ಶೆಟ್ಟಿ, ಹರೀಶ್ ಮೂಡುಶೆಡ್ಡೆ ಹಾಗೂ ಮತ್ತಿತರರು ಇದ್ದರು.
