ಬ್ರಹ್ಮಾವರ:ಬಸ್ಸು ನಿಲ್ಧಾಣ, ರೈಲು ನಿಲ್ಧಾಣ, ಪಾದಚಾರಿ ರಸ್ತೆಗಳಲ್ಲಿ ನೆಲೆ ಕಂಡಿರುವ, ಅನಾಥರು ವೃದ್ದರು, ಅಂಗವಿಕಲರು, ಮಹಿಳೆಯರು ಮಾನಸಿಕ ಅಸ್ವಸ್ಥರು, ಮಕ್ಕಳಿಂದ ಹೊರದಬ್ಬಲ್ಪಟ್ಟವರು, ಇಂತಹ ಅಸಹಾಯಕರನ್ನು ಪ್ರೀತಿಯಿಂದ ಅಪ್ಪ ಅಮ್ಮನ ಸ್ಥಾನದಲ್ಲಿ ನಿಂತು ಸಲಹುತ್ತಿದೆ, ಬ್ರಹ್ಮಾವರ- ಆಕಾಶವಾಣಿ ಸನಿಹದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ “ಅಪ್ಪ- ಅಮ್ಮ” ಉಚಿತ ಅನಾಥಾಲಯ.
ಈ ಆಶ್ರಮದ ಸ್ಥಾಪಕ ಪ್ರಶಾಂತ್ ಪೂಜಾರಿ ಕೂರಾಡಿ. ಇವರು 32 ರ ಹರೆಯದ ಯುವಕ, ಇಂಜಿನಿಯರಿಂಗ್ ಡಿಪ್ಲೊಮ ಪದವಿಧರರು. ಪ್ರಶಾಂತ ಪೂಜಾರಿ ಅವರು ಹೊರದೇಶದಲ್ಲಿ ಉದ್ಯೋಗದಲ್ಲಿದ್ದವರು. ಹತ್ತು ವರ್ಷಗಳ ಕಾಲ ಗಲ್ಫ್ ದೇಶದಲ್ಲಿ ದುಡಿದ ಇವರು ತನ್ನ ಊರಾದ ಕೂರಾಡಿಯಲ್ಲಿ ಸಾಮಾಜಿಕ ಸೇವೆಯಲ್ಲಿ ನಿರತರಾದರು. ಗಿರಿಜಾ ಕೃಷ್ಣಪೂಜಾರಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಅದರ ಅಡಿಯಲ್ಲಿ ಬಾರ್ಕೂರು, ಹನೇಹಳ್ಳಿ, ಕಾಡೂರು ಗ್ರಾಮಗಳ ವಾಸಿಗಳಿಗೆ ಸಂಕಷ್ಟಗಳು ಎದುರಾದಗ, ಉಚಿತ ಅಂಬುಲೇನ್ಸ್ ಸೇವೆಯನ್ನೂ ನೀಡುತ್ತಿದ್ದಾರೆ.
ಕಾಲೇಜು ದಿನಗಳಲ್ಲಿ ಪ್ರಶಾಂತ್ ಪೂಜಾರಿ ಅವರಿಗೆ ಬಸ್ಸು ತಂಗುದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ಭೀಕ್ಷುಕರು, ವೃದ್ಧರು ಕಂಡರೆ ಏನೋ ಒಂದು ಮಮತೆ ಕನಿಕರವಂತೆ. ಅವರ ಸನಿಹ ಹೋಗಿ ಆರೋಗ್ಯ ವಿಚಾರಿಸುತ್ತಿದ್ದರು. ತಿಂಡಿ ತಿನಿಸು, ಬಟ್ಟೆಗಳನ್ನು ಒದಗಿಸುತ್ತಿದ್ದರು. ತಾನು.. ಮುಂದೆ ಇಂತಹವರ ಬಾಳಿಗೆ ಬೆಳಕಾಗಬೇಕು. ಇವರಿಗಾಗಿ ನೆಲೆ ಕೊಡಲು ಅನಾಥಶ್ರಮ ಸ್ಥಾಪಿಸಬೇಕೆಂಬ, ಬಲುದೊಡ್ಡ ಕನಸನ್ನು ಕಾಲೇಜು ದಿನಗಳಲ್ಲೇ ಕಂಡಿದ್ದರಂತೆ. ಕೊನೆಗೂ ಸತತ ಪ್ರಯತ್ನದಿಂದ ಅನಾಥಶ್ರಮ ಸ್ಥಾಪನೆ ಮಾಡಿ ಪ್ರಶಾಂತ ಪೂಜಾರಿ ಅವರು ತಮ್ಮ ಕಾಲೇಜು ದಿನಗಳ ಕನಸನ್ನು ನನಸಾಗಿಸಿದ್ದಾರೆ.
ಪ್ರಶಾಂತ್ ಅವರು ತಮ್ಮ ಆಶ್ರಮದಲ್ಲಿ ಒಟ್ಟು 15 ಜನ ಅಸಹಾಯಕರಿಗೆ ಆಶ್ರಯ ಕಲ್ಪಿಸಿದ್ದಾರೆ. ವಾರಸುದಾರರು ಪತ್ತೆಯಾದವರನ್ನು ಮನೆಯವರ ವಶಕ್ಕೆ ನೀಡಿದ್ದಾರೆ. ಆಶ್ರಮವಾಸಿಗಳಿಗೆ ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ, ವೈದ್ಯಕೀಯ ಸೇವೆ, ಬೇಸರ ಕಳೆಯಲು ಟಿ.ವಿ, ಪತ್ರಿಕೆ ಎಲ್ಲ ಮೂಲ ಸೌಕರ್ಯವು ಇಲ್ಲಿದೆ. ಅಪ್ಪ ಅಮ್ಮರನ್ನು ನೋಡಿಕೊಳ್ಳುವಂತೆ, ಪ್ರಶಾಂತ್ ಪೂಜಾರಿ ಅವರು ಆಶ್ರಮವಾಸಿಗಳಿಗೆ ಅನಾಥಪ್ರಜ್ಞೆ ಕಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಅಡಿಗೆ ತಯಾರಿಕೆ, ಸ್ವಚ್ಚತೆಗೆ ಸಿಬ್ಬಂದಿಯನ್ನು ಪ್ರಶಾಂತ್ ಅವರು ನೆಮಿಸಿದ್ದಾರೆ. ಮುಂದಿನ ದಿನಗಳಲ್ಲಿ 30 ಜನರಿಗೆ ಆಶ್ರಯ ನೀಡುವ ಗುರಿಯನ್ನು ಪ್ರಶಾಂತ್ ಅವರು ಹೊಂದಿದ್ದಾರೆ. ತಂದೆ ತಾಯಿಯನ್ನು ಸಾಕಲಾಗದೆ, ಬೀದಿ ತಳ್ಳುವ ಈ ಕಾಲಘಟ್ಟದಲ್ಲಿ, ತನಗೆ ಸಂಬಂಧನೆ ಇಲ್ಲದವರನ್ನು, ಪ್ರಶಾಂತ್ ಅವರು ಅಪ್ಪ ಅಮ್ಮರಂತೆ ಸಾಕಿ ಸಲಹುತ್ತಾರೆಂದರೆ ಅವರ ದಯಾಗುಣವನ್ನು ಮೆಚ್ಚಲೇ ಬೇಕು.
ಅಷ್ಟು ಜನರನ್ನು ಪ್ರಶಾಂತ ಪೂಜಾರಿ ಅವರು ಪೋಷಣೆ ಮಾಡುತ್ತಾರೆಂದರೆ ಸುಲಭದ ಮಾತಲ್ಲ. ಅಪ್ಪ ಅಮ್ಮ ಆಶ್ರಮವು ಬಾಡಿಗೆ ಕಟ್ಟಡದಲ್ಲಿ ನಡೆಯುವುತ್ತಿರುವುದು. ಕಟ್ಟಡದ ಬಾಡಿಗೆ ಭರಿಸಬೇಕು, ವಿದ್ಯುತ್ ಬಿಲ್ಲು ಕಟ್ಟಬೇಕು, ಪಡಿತರ ಸಾಮಾಗ್ರಿ, ಸಿಬ್ಬಂದಿ ವೇತನ ಇವೆಲ್ಲವು ಸೇರಿದಾಗ ತಿಂಗಳಲ್ಲಿ ದೊಡ್ಡ ಮೊತ್ತವೇ ಆಗುತ್ತದೆ. ಪ್ರಶಾಂತ್ ಅವರ ಸೇವಾ ಕಾರ್ಯದಲ್ಲಿ ಸಹೃದಯಿ ದಾನಿಗಳು, ಸಂಘ-ಸಂಸ್ಥೆಗಳು, ತಮ್ಮಿಂದಾದ ನೆರವು ನೀಡಿ ಭಾಗಿಗಳಾದರೆ.. ನೀವೊಂದು ಪುಣ್ಯಕಾರ್ಯದಲ್ಲಿ ಭಾಗಿಯಾದ ಪುಣ್ಯದ ಫಲವು ದೊರೆಯುವುದಂತು ಖಂಡಿತ. ಯುವಕನೊರ್ವನ ಸೇವಾಗಾಥೆ ಕೇಳಿದಾಗ, ಅವರ ಕಾರ್ಯಕ್ಕೆ ಶಹಬ್ಭಾಶ್ ಹೇಳಲೇ ಬೇಕಲ್ಲವೇ..! ಅವರೊಂದಿಗೆ ಮಾತನಾಡಿ. ಥ್ಯಾಂಕ್ಸ್ ಹೇಳಿ ಓಕೆ. ಪ್ರಶಾಂತ್ ಪೂಜಾರಿ- ಸಂಚಾಲಕರು, ಅಪ್ಪ-ಅಮ್ಮ ಅನಾಥಾಲಯ 9986111989, 9164765898
ಬರಹ:- ತಾರಾನಾಥ್ ಮೇಸ್ತ ಶಿರೂರು.
