ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬಡ್ಡಿ ಮಾಫಿಯಾದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದ್ದು ಈ ಸಂಬಂಧ ಸೆ.27ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಗಣ್ಯರ ಜತೆ ಸಭೆ ನಡೆಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.ತಾಲೂಕಿನ ನರಸಾಪುರದ ಕನಕ ಭವನದಲ್ಲಿ ನಡೆದ ಗ್ರಾಮದ ರೇಷ್ಮೆಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರ ತಾಲೂಕನ್ನು ಪ್ರಾಯೋಗಿಕವಾಗಿ ಬಡ್ಡಿಮಾಫಿಯಾ ಮುಕ್ತ ಮಾಡುವ ನಿಟ್ಟಿನಲ್ಲಿ ಶುಕ್ರವಾರ ನಡೆಯುತ್ತಿರುವ ಸಭೆಗೆ ಪ್ರಗತಿಪರ ರೈತರು, ಗಣ್ಯರು, ಪ್ರಮುಖ ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳು,ಹಿರಿಯ ಸಹಕಾರಿಗಳು ಹಾಗೂ ಇತರೆ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಲಾಗಿದ್ದು ಅಲ್ಲಿ ವ್ಯಕ್ತವಾಗುವ ಸಲಹೆ, ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಆಧರಿಸಿ ತಾಲೂಕಿನ ಮನೆ ಮನೆಗೂ ಅಗತ್ಯವಾದ ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವ ದೆಸೆಯಲ್ಲಿ ಗುರಿ ಹೊಂದಲಾಗಿದೆ ಎಂದರು.
ಬಡತನ ಮುಕ್ತ ಸಮಾಜ: ಪ್ರಮುಖವಾಗಿ ರೈತರು ಹಾಗೂ ಹೆಣ್ಣು ಮಕ್ಕಳು ಬಡ್ಡಿ ದಂಧೆಕೋರರ ಬಳಿ ಹೋಗದಂತೆ ಅವರಿಗೆ ಅಗತ್ಯವಾದ ಸಾಲವನ್ನು ಶೀಘ್ರವಾಗಿ ಕೊಡುವ ವ್ಯವಸ್ಥೆಯನ್ನು ರೂಪಿಸಬೇಕಿದ್ದು ಈ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದೆ. ಡಿಸಿಸಿ ಬ್ಯಾಂಕಿನ ಇಂದಿನ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟು ಠೇವಣಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ದುಡಿಯುವ ಕೈಗಳಿಗೆ ಸಾಲ ನೀಡುವ ಜತೆಗೆ ಕಳ್ಳಕಾಕರಿಗೆ ಸರ್ಕಾರದ ಸೌಲಭ್ಯವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಬೆಳೆಯನ್ನೇ ಇಡದೆ ಜಮೀನಿನ ಕಡೆಗೆ ಸುಳಿಯದ ಗಿರಾಕಿಗಳಿಗೆ ಬೆಳೆ ಸಾಲವನ್ನು ನಿಲ್ಲಿಸುವ ನಿಟ್ಟಿನಲ್ಲಿಯೂ ಕೆಲಸ ಆಗಬೇಕಿದೆ ಎಂದು ಸೂಚಿಸಿದರು.ರಾಷ್ಟ್ರೀಕೃತ ಬ್ಯಾಂಕ್ಗೆ ಸವಾಲು: ನರಸಾಪುರದಂತಹ ಸಣ್ಣ ಸೊಸೈಟಿ ಮೂಲಕ ಸ್ತ್ರೀ ಶಕ್ತಿ ಸಂಘ ಹಾಗೂ ರೈತರಿಗೆ ಈ ವರ್ಷ 23 ಕೋಟಿ ರೂ. ಸಾಲ ನೀಡಲಾಗಿದ್ದು ಈ ಕೆಲಸವನ್ನು ಯಾವ ಕಮರ್ಷಿಯಲ್ ಬ್ಯಾಂಕ್ ಮಾಡಿದೆ ಎಂದು ಸವಾಲು ಹಾಕಿದ ಗೋವಿಂದಗೌಡರು ಅಕ್ಟೋಬರ್ 10 ರಂದು ನರಸಾಪುರ ಮಹಿಳಾ ಸಂಘಗಳಿಗೆ 10 ಕೋಟಿ ರೂ. ಸಾಲ ನೀಡಲಾಗುತ್ತಿದೆ ಎಂದು ಪ್ರಕಟಿಸಿದರು.ಶೂನ್ಯ ಬಡ್ಡಿ ದರದಲ್ಲಿ ಎಲ್ಲರಿಗೂ ಸಾಲ ನೀಡುವ ಮೂಲಕ ಬಡತನ ಮುಕ್ತ ಸಮಾಜ ನಿರ್ಮಾಣ ಡಿಸಿಸಿ ಬ್ಯಾಂಕ್ ಆಶಯವಾಗಿದ್ದು ಈ ಉದ್ದೇಶದೊಂದಿಗೆ ಸೆ.27 ರಂದು ನಡೆಯುತ್ತಿರುವ ಚಿಂತನ ಮಂಥನ ಸಭೆಯನ್ನು ನಂತರದಲ್ಲಿ ಅವಳಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಟ್ಟಡ ನಿರ್ಮಾಣ: ನರಸಾಪುರ ಸೊಸೈಟಿ ಅಧ್ಯಕ್ಷ ಕೆ.ಎಂ.ಮುನಿರಾಜು ಮಾತನಾಡಿ, ಸಂಘಕ್ಕೆ ಹೊಸ ಕಟ್ಟಡ ಕಟ್ಟಲು ಕ್ರಮ ಕೈಗೊಳ್ಳುವ ಜತೆಗೆ ತಕ್ಷಣದಿಂದಲೇ ರೇಷ್ಮೆ ಮನೆ, ಕೋಳಿಫಾರಂ ಹಾಗೂ ಮಹಿಳೆಯರಿಗೆ ಸಾಲ ನೀಡಲು ಅರ್ಜಿ ನೀಡಲಾಗುತ್ತದೆ ಎಂದು ತಿಳಿಸಿದರಲ್ಲದೆ ಡಿಸಿಸಿ ಬ್ಯಾಂಕಿನಿಂದ 300 ರೈತರಿಗೆ ಬೆಳೆ ಸಾಲ ನೀಡಬೇಕೆಂದು ಮನವಿ ಮಾಡಿದರು.ಸೊಸೈಟಿ ಸಿಇಒ ನವೀನ್ ಕುಮಾರ್, ಸದಸ್ಯರಾದ ವಾಸುದೇವ, ಎಸ್.ಸುರೇಶ್,ಬಿ.ಎ.ಚನ್ನರಾಯಪ್ಪ,ನಾಗರಾಜ,ಎಂ.ಮೋಹನ್ಕಮಾರ್,ಎನ್.ಚಂದ್ರಶೇಖರ್,ರಾಜಮ್ಮ,ರತ್ನಮ್ಮರಮೇಶ್, ಈರಯ್ಯ, ಸಿಬ್ಬಂದಿ ಪವಿತ್ರ,ಜಿ.ಗಂಗಾಧರ, ಕೆ.ಆರ್.ನಾಗರಾಜು,ಬಸವರಾಜ್,ಬೈರೇಗೌಡ,ನಾರಾಯಣಪ್ಪ ಮತ್ತು ಸೋಮಶೇಖರ್ ಇದ್ದರು.
ಮಾಜಿ ಸಚಿವ ಸಿ.ಬೈರೇಗೌಡರ ತವರು ನರಸಾಪುರದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯನ್ನು ತೆರೆಯಲು ನಿರ್ಧರಿಸಲಾಗಿದ್ದು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತೆಯೇ ಸೊಸೈಟಿಗಳ ಮೂಲಕ ಶೇ.23 ಪೈಸೆ ದರದಲ್ಲಿ ರೈತರಿಗೆ ಚಿನ್ನಾಭರಣದ ಮೇಲೆ ಸಾಲ ನೀಡುವುದರೊಂದಿಗೆ ಬಡವರ,ಮಹಿಳೆಯರ ಹಾಗೂ ರೈತರ ಸ್ನೇಹಿ ಸಂಸ್ಥೆಯನ್ನಾಗಿ ಮಾಡಲಾಗುತ್ತದೆ.
–
ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್
ಸಾಲಕ್ಕೆ ಸಹಕಾರ: ಠೇವಣಿಗೆ ಅಸಹಕಾರ
ಸಹಕಾರಿ ವ್ಯವಸ್ಥೆಯನ್ನು ಬಲಪಡಿಸದಿದ್ದರೆ ರಾಷ್ಟ್ರೀಕೃತ ಬ್ಯಾಂಕ್ಗಳ ಮುಂದೆ ಜನತೆ ಭಿಕ್ಷುರಂತೆ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಎಚ್ಚರಿಸಿದರು. ಸಾಲಕ್ಕೆ ಸಹಕಾರಿ ಬ್ಯಾಂಕ್ ಕದ ತಟ್ಟುವ ಗ್ರಾಹಕರು ಹಣ ಠೇವಣಿ ಇಡಲು ರಾಷ್ಟ್ರೀಕೃತ ಬ್ಯಾಂಕ್ಗಳತ್ತ ಮುಖ ಮಾಡುವ ಸಾಂಪ್ರಾದಾಯಿಕ ನಿಲುವನ್ನು ಬದಲಾಯಿಸಿಕೊಳ್ಳಬೇಕು. ಸೊಸೈಟಿ ಸಭೆಗಳಲ್ಲಿ ಸಹಕಾರಿಗಳು ಕಡ್ಡಾಯವಾಗಿ ಭಾಗವಹಿಸುವ ಮೂಲಕ ಚುನಾವಣೆಗೆ ನಿಲ್ಲುವ ಅರ್ಹತೆಯನ್ನು ಪಡೆದುಕೊಳ್ಳುವುದರೊಂದಿಗೆ ಕ್ಷೇತ್ರವನ್ನು ಪ್ರತಿನಿಧಿಸುವಂತಾಗಬೇಕು ಎಂದು ಮನವಿ ಮಾಡಿದರು.
ಮಾಯಮಂತ್ರ ಇಲ್ಲ, ಶ್ರಮವೇ ಎಲ್ಲ
ಬಾಗಿಲು ಹಾಕುವ ಹಂತಕ್ಕೆ ಬಂದಿದ್ದ ಡಿಸಿಸಿ ಬ್ಯಾಂಕನ್ನು ಉಳಿಸಿ ಲಾಭದತ್ತ ತೆಗೆದುಕೊಂಡು ಹೋಗಿ ದೇಶದ ಸಹಕಾರಿ ಭೂಪಟದಲ್ಲಿ ಕೋಲಾರಕ್ಕೆ ಸ್ಥಾನ ಕಲ್ಪಿಸಿರುವ ಕ್ರಮದ ಹಿಂದೆ ಯಾವುದೇ ಮಾಯಮಂತ್ರ ಇಲ್ಲ. ಅಧ್ಯಕ್ಷ ಗೋವಿಂದಗೌಡ ನೇತೃತ್ವದ ಆಡಳಿತ ಮಂಡಳಿ ಶ್ರಮದ ಫಲ ಎಂದು ನಿರ್ದೇಶಕ ಎನ್.ಸೋಮಶೇಖರ್ ಬಣ್ಣಿಸಿದರು.
ನರಸಾಪುರ ಸೊಸೈಟಿ ಮತ್ತಷ್ಟು ಪಾರದರ್ಶಕವಾಗಬೇಕೆಂದು ಸಲಹೆ ನೀಡಿದರಲ್ಲದೆ ಸಹಕಾರ ವ್ಯವಸ್ಥೆಯಲ್ಲಿನ ಸಣ್ಣ ಪುಟ್ಟ ಗೊಂದಲಗಳನ್ನು ಸರಿಪಡಿಸಿಕೊಂಡು ಸಂಸ್ಥೆಯನ್ನು ಮತ್ತಷ್ಟು ಬಲಯುತವಾಗಿ ಕಟ್ಟಬೇಕೆಂದು ಸಲಹೆ ನೀಡಿದರು.
ಲೋಕಸಭಾ ಚುನಾವಣೆಗಾಗಿ ಸಾಲ ನೀಡಲಾಗುತ್ತಿದೆ ಎಂದು ಕೆಲವರು ನೀಡಿದ ಸುಳ್ಳು ದೂರಿನಿಂದಾಗಿ ರೈತರು ಹಾಗೂ ಮಹಿಳೆಯರಿಗೆ ಸಾಲ ನೀಡಲು 4 ತಿಂಗಳು ತಡವಾಯಿತು. ಡಿಸಿ ಕಚೇರಿ ಅಧಿಕಾರಿಗಳು ಪ್ರತಿದಿನ ಡಿಸಿಸಿ ಬ್ಯಾಂಕ್ಗೆ ಬಂದು ತಪಾಸಣೆ ನಡೆಸಿ ಯಾವುದೇ ಸ್ತ್ರೀ ಶಕ್ತಿ ಸಂಘಕ್ಕೆ ಸಾಲ ಕೊಟ್ಟಿಲ್ಲ ಎಂದು ಮನವರಿಕೆ ಮಾಡಿಕೊಂಡು ಹೋಗಿದ್ದಾರೆ. ಆದರೂ ಧೈರ್ಯ ಮಾಡಿ ನೀತಿ ಸಂಹಿತೆ ಆರಂಭ ಆಗುವವರೆಗೆ ಬಡವರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಗೋವಿಂದಗೌಡರು ಜನರ ಕೈ,ಕಾಲು ಹಿಡಿದು ಠೇವಣಿ ತಂದು ಸಾಲ ನೀಡುವ ಕೆಲಸ ಆಗುತ್ತಿದ್ದು ಇದನ್ನು ಸೊಸೈಟಿಗಳು ಅರ್ಥ ಮಾಡಿಕೊಂಡು ಸ್ಥಳೀಯವಾಗಿ ಠೇವಣಿ ಸಂಗ್ರಹ ಮಡುವ ಕೆಲಸ ಆಗಬೇಕು ಎಂದು ಸೂಚಿಸಿದರು.
