ಬಂಟ್ವಾಳ:ಆಟಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗುರುವಾರ ಬಂಟ್ವಾಳ ತಾಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳಾದ ಕಾರಿಂಜೇಶ್ವರ,ವಾಮದಪದವು ನೀಲಕಂಠೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತಗಳಲ್ಲಿ ನೂರಾರು ಮಂದಿ ಆಗಮಿಸಿ ತೀರ್ಥಸ್ನಾನ ಕೈಗೊಂಡರು.
ನಸುಕಿನ ವೇಳೆಯೇ ಈ ಕ್ಷೇತ್ರಗಳಲ್ಲಿ ಭಕ್ತರ ಸಾಲು ಕಂಡುಬಂತು. ಆಟಿ ಅಮಾವಾಸ್ಯೆ ಸಂದರ್ಭ ಇಲ್ಲಿನ ಪುಣ್ಯತೀರ್ಥಗಳ ಪವಿತ್ರ ಜಲದಲ್ಲಿ ಸ್ನಾನ ಮಾಡಿದರೆ, ಸರ್ವರೋಗ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಅಸುಪಾಸಿನ ಪರವೂರಿನ ಭಕ್ತರು ಜಾತಿ, ಧರ್ಮ ಬೇಧವಿಲ್ಲದೆ ಈ ಕ್ಷೇತ್ರಗಳ ಪವಿತ್ರ ಕೆರೆಗಳಲ್ಲಿ ಮಿಂದು ದೇವರ ಆಶೀರ್ವಾದ ಪಡೆದರು.
ಶಾಸಕರ ಭೇಟಿ:
ಶಾಸಕ ಯು.ರಾಜೇಶ್ ನಾಯ್ಕ್ ಅವರು ನರಹರಿನರಹರಿ ಪರ್ವತ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ಡಾ. ಆತ್ಮರಂಜನ್ ರೈಯವರ ನೇತೃತ್ವದ ಜೀರ್ಣೋದ್ದಾರ ಸಮಿತಿ ಹಾಗೂ ಆಡಳಿತ ಮೋಕ್ತೆಸರರಾದ ಡಾ. ಪ್ರಶಾಂತ ಮಾರ್ಲ ಹಾಗೂ ಆಡಳಿತ ಮಂಡಳಿ ಯ ಜೊತೆ ಕ್ಷೇತ್ರದ ಜೀರ್ಣೋದ್ಧಾರದ ಕುರಿತು ಶಾಸಕ ಯು.ರಾಜೇಶ್ ನಾಯ್ಕ್ ಚರ್ಚಿಸಿದ್ದಾರೆ. ಉತ್ಸವ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಆಡಳಿತ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಮಾಜಿ ಶಾಸಕ ಎ.ಪದ್ಮನಾಭ ಕೊಟ್ಟಾರಿ, ಜಿಪಂಎಂಜಿನಿಯರಿಂಗ್ ವಿಭಾಗದ ಎಇಇ ನರೇಂದ್ರಬಾಬು ಉಪಸ್ಥಿತರಿದ್ದರು.
ಕಾರಿಂಜದಲ್ಲು ತೀರ್ಥಸ್ನಾನ:
ಆದೇ ರೀತಿ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿಯು ನೂರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸಿ ಪವಿತ್ರ ಕೆರೆಯಲ್ಲಿ ತೀರ್ಥಸ್ನಾನಗೈದರು. ಜಿನರಾಜ ಆರಿಗ ನೇತೃತ್ವದಲ್ಲಿ ಆಡಳಿತ ಸಮಿತಿ ಸಕಲ ವ್ಯವಸ್ಥೆಗಳನ್ನು ಮಾಡಿತ್ತು. ಮಾಜಿ ಸಚಿವ ಬಿ.ರಮಾನಾಥ ರೈ, ಜಿಪಂ ಸದಸ್ಯ ಪದ್ಮಶೇಖರ ಜೈನ್ ಸಹಿತ ಗಣ್ಯರು ಆಗಮಿಸಿ ದೇವರ ದರ್ಶನ ಪಡೆದರು. ನೀಲಕಂಠದಲ್ಲು ತೀರ್ಥಸ್ನಾನ:
ಬಂಟ್ವಾಳ ಸಮೀಪದ ವಾಮದಪದವಿನ ನೀಲಿ ನೀಲಕಂಠೇಶ್ವರ ದೇವಸ್ಥಾನದಲ್ಲು ಇತಿಹಾಸ ಪ್ರಸಿದ್ದವಾದ ಕೆರೆಯಲ್ಲು ಪರಿಸರದ ನೂರಾರು ಮಂದಿ ಭಕ್ತರು ಅಗಮಿಸಿ ತೀರ್ಥಸ್ನಾನಗೈದರು.ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಗೋಪಾಲಕೃಷ್ಣ ಚೌಟ,ಸದಾಶಿವ ಪೂಜಾರಿ,ಸಂತೋಷ ಜೈನ್,ಶ್ಯಾಮ್ ಪ್ರಸಾದ್,ಪುರುಷೊಇತ್ತಮ ಶೆಟ್ಟಿ ವಾಮದಪದವು,ವಿಜಯ ರೈ,ದಿನೇಶ್ ಶೆಟ್ಟಿ,ಯಶೋಧರ ಶೆಟ್ಟಿ,ಪ್ರಕಾಶ್ ಪುಜಾರಿ,ಮೋಹನ್ ದಾಸ್ ಗಟ್ಟಿ,ಗುಣಾವತಿ,ಸದಾನಂದ ಶೆಟ್ಟಿ ಮೊದಲಾದವರಿದ್ದರು.

