ಮೂಡುಬಿದಿರೆ: ಬಸ್ಸಿನಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿದ ಆರೋಪದಲ್ಲಿ ಪೊಲೀಸ್ ಕಮಿಷನರ್ ಅವರ ಸೂಚನೆ ಮೇರೆಗೆ ಖಾಸಗಿ ಬಸ್ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ಬಸ್ಸಿನ ಪರವಾನಿಗೆ ರದ್ದತಿಗೆ ಮೇಲಾಧಿಕಾರಿಗಳ ಮೂಲಕ ಆರ್‍ಟಿಒಗೆ ಶಿಫಾರಸು ಮಾಡಿದ್ದಾರೆ.
ಮೂಡುಬಿದಿರೆಯಿಂದ ಸಂಜೆ 4 ಗಂಟೆ ಸುಮಾರಿಗೆ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ವಿದ್ಯಾಗಿರಿಯಿಂದ ಮತ್ತಷ್ಟು ವಿದ್ಯಾರ್ಥಿಗಳು ಬಸ್ಸೇರುತ್ತಿರುವುದರಿಂದ ಬಸ್ ಭರ್ತಿಯಾಗಿ ಕೆಲವು ವಿದ್ಯಾರ್ಥಿಗಳು ಫುಟ್ ಬೋರ್ಡ್‍ನಲ್ಲಿ ಇನ್ನು ಕೆಲವು ವಿದ್ಯಾರ್ಥಿಗಳು ಬಸ್ ಹಿಂಬದಿಯ ಏಣಿಯಲ್ಲಿ ನೇತಾಡಿಕೊಂಡು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿದ್ದರು. ವಿದ್ಯಾರ್ಥಿಗಳು ಹೀಗೆ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುವಾಗ ಬಸ್ ಡ್ರೈವರಾಗಲಿ ಕಂಡಕ್ಟರ್ ಆಗಲಿ ಆಕ್ಷೇಪಿಸದೆ ಇರುವುದರಿಂದ ಇಂತಹ ಘಟನೆ ನಿತ್ಯ ಮರುಕಳಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ನಾಗರಿಕರೊಬ್ಬರು ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟಿಲ್ ಅವರಿಗೆ ಬಸ್ಸಿನಲ್ಲಿ ಪ್ರಯಾಣಿಕರು ನೇತಾಡಿಕೊಂಡು ಹೋಗುವ ಫೊಟೊ ತೆಗೆದು ವಾಟ್ಸಪ್‍ನಲ್ಲಿ ಕಳಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಕಮಿಷನರ್ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮೂಡುಬಿದಿರೆ ಎಸ್.ಐ ದೇಜಪ್ಪ ಹಾಗೂ ಸಿಬಂದಿಗಳು ಮದರ್ ಇಂಡಿಯಾ ಬಸ್ಸಿನ ಚಾಲಕ ದಿನೇಶ್ ಮತ್ತು ಕಂಡಕ್ಟರ್ ಹೇಮಂತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಸ್ ಚಾಲಕರ ಚಾಲನಾ ಅನುಜ್ಞಾ ಪರವಾನಿಗೆ ಮತ್ತು ಬಸ್ಸಿನ ಪರ್ಮಿಟ್ ರದ್ದತಿಗೆ ಮೇಲಾಧಿಕಾರಿಗಳ ಮೂಲಕ ಮಂಗಳೂರು ಆರ್.ಟಿ.ಒಗೆ ಶಿಫಾರಸು ಮಾಡಿದ್ದಾರೆ.
