ಪೊಳಲಿ: ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಮತ್ತು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಸಂಯುಕ್ತ ಆಶ್ರಯದಲ್ಲಿ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಜು.21ರಿಂದ ಆರಂಭಗೊಳ್ಳಲಿರುವ ಭಾರತ ಶಿಕ್ಷಣ ಯಾತ್ರೆ- ದೆಹಲಿ ಚಲೋ ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ದೇವಸ್ಥಾನದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಕರಪತ್ರ ಬಿಡುಗಡೆಗೊಳಿಸಿದರು.
ಅವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಕರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಪ್ರಕಾಶ್ ಅಂಚನ್ ಅವರ ಮುಂದಾಳತ್ವದಲ್ಲಿ ಭಾರತ ಯಾತ್ರೆ ಕೈಗೊಂಡಿರುವುದು ಅಭಿನಂದನೀಯ. ದೇಶದ ಬಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೈಗೊಂಡಿರುವ ಈ ಶಿಕ್ಷಣ ಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ದೇಶದ ವಿವಿಧ ರಾಜ್ಯಗಳಲ್ಲಿ ಸರಕಾರಿ ಮತ್ತು ಖಾಸಗಿ ಎಂಬ ತಾರತಮ್ಯದ ಶಿಕ್ಷಣ ನೀತಿಯಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದೇಶದ ಪ್ರತೀ ಪ್ರಜೆಗೂ ಒಂದೇ ರೀತಿಯ ಶಿಕ್ಷಣ ಸಿಕ್ಕರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ.
ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದು ದೇಶದಾದ್ಯಂತ ಏಕರೂಪ ಶಿಕ್ಷಣ ಪದ್ದತಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ಅಧ್ಯಕ್ಷ ಪ್ರಕಾಶ್ ಅಂಚನ್ ಮಾಹಿತಿ ನೀಡಿದರು.ಭಾರತ ಶಿಕ್ಷಣ ಯಾತ್ರೆಯು ಪೊಳಲಿಯಿಂದ ಆರಂಭಗೊಂಡು ಪಣಜಿ, ಗೋವಾ, ಮಹರಾಷ್ಟ್ರ, ಗುಜರಾತ್, ರಾಜಾಸ್ಥಾಮ, ಹರಿಯಾಣ ಮೂಲಕ ದೆಹಲಿ ತಲುಪಲಿದೆ. ಆ.1ರಂದು ದೆಹಲಿಯ ಜಂತರ್ ಮಂತರ್‍ನಲ್ಲಿ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ಭಾರತ ಶಿಕ್ಷಣ ಯಾತ್ರೆಯ ರುವಾರಿ ಪ್ರಕಾಶ್ ಅಂಚನ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ಉಪಾಧ್ಯಕ್ಷ ಮಯೂರ್ ಕೀರ್ತಿ, ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯರಾದ ರಾಮಚಂದ್ರ ಪೂಜಾರಿ ಕರೆಂಕಿ, ದೀಪಕ್ ಸಾಲ್ಯಾನ್, ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೇರಾ, ತಾ.ಪಂ.ಸದಸ್ಯ ಯಶವಂತ ಪೊಳಲಿ, ವೆಂಕಟೇಶ್ ನಾವುಡ ಪೊಳಲಿ, ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಪ್ರಮುಖರಾದ ನವೀನ್ ಎಸ್., ದೀಲಿಪ್ ಡೆಚ್ಚಾರು, ಅಶ್ವಥ್ ಡೆಚ್ಚಾರ್, ಪ್ರವೀಣ್ ಎಸ್., ಸಂತೋಷ್ ರಾಯಿಬೆಟ್ಟು, ಧನುಷ್ ಪಿ.ಮೆಂಡನ್, ಶೈಲೇಶ್ ಡೆಚ್ಚಾರ್, ವಿಜಯ್ ಅಮ್ಟಾಡಿ ಮೊದಲಾದವರು ಹಾಜರಿದ್ದರು.

