ಕೈಕಂಬ : ಗುರುಪುರ ಪೇಟೆಗೆ ಹತ್ತಿರದಲ್ಲಿರುವ ಮಾಣಿಬೆಟ್ಟು ಪರಿಸರದಲ್ಲಿ ಸುಮಾರು 400 ವರ್ಷಗಳಷ್ಟು ಹಿಂದೆ ಆರಾಧಿಸಲ್ಪಡುತ್ತಿದ್ದ ಕೋರ್ದಬ್ಬು, ತನ್ನಿಮಾನಿಗ, ಗುಳಿಗ-ಪಂಜುರ್ಲಿ, ರಾಹು ಹಾಗೂ ಕಂಬೆರ್ಲು ಮತ್ತು ಉಲ್ಲಾಳ್ತಿ ದೈವಗಳ ಸಾನಿಧ್ಯ ಕಾಲಾಂತರದಲ್ಲಿ ಪಾಳು ಬಿದ್ದಿತ್ತು. ಇತ್ತೀಚೆಗೆ ತಾಂಬೂಲ ಪ್ರಶ್ನೆಯಲ್ಲಿ ಕೇಳಿ ಬಂದಂತೆ ಇಲ್ಲಿ ನೂತನ ದೈವಸ್ಥಾನ ತಲೆ ಎತ್ತಿದೆ.
ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ ಮೇ. 8 ಮತ್ತು 9ರಂದು ಜಿ ಟಿ ವಾಸುದೇವ ಭಟ್ ನೇತೃತ್ವದಲ್ಲಿ ವಿನಾಯಕ ಕಾರಂತ ಕಾವೂರು ಪೌರೋಹಿತ್ಯದಲ್ಲಿ ಪುನಾ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಜರುಗಲಿದೆ. ಮೇ 7ರಂದು ಶಿಲ್ಪಿಗಳ ಆಲಯ ಸ್ವೀಕಾರ ಸಹಿತ ವಿವಿಧ ಪೂಜೆಗಳು ನಡೆಯಲಿವೆ. ಮೇ 8ರಂದು ಬೆಳಿಗ್ಗೆ ಗಣಹೋಮ, ದೈವಗಳ ಪುನಾ ಪ್ರತಿಷ್ಠೆ, ಕಲಶಾಭಿಷೇಕ, ದೈವ ದರ್ಶನ, ಬೆಳಿಗ್ಗೆ 10ಕ್ಕೆ ಕಂಬೆರ್ಲು ಮತ್ತು ಉಳ್ಳಾಲ್ತಿ ದೈವದ ಪುನರ್‍ಪ್ರತಿಷ್ಠೆ ಹಾಗೂ ಕಂಬೆರ್ಲು ದೈವದ ದರ್ಶನ ಸೇವೆ, ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಬಬ್ಬು ಬಾರಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಸಂಜೆ 5ಕ್ಕೆ ಭಂಡಾರ ಏರಲಿದೆ. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ರಾತ್ರಿ 7ರಿಂದ ರಂಗ ಸುದರ್ಶನ ಸಸಿಹಿತ್ಲು ಕಲಾವಿದರಿಂದ `ಬಾಲೆಗ್ ಒಲಿನ ಭ್ರಾಮರಿ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 8:30ಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್‍ಸಿ ಐವನ್ ಡಿ’ಸೋಜ, ಡಾ. ಎಂ ಎನ್ ರಾಜೇಂದ್ರಕುಮಾರ್ ಭಾಗವಹಿಸುವರು. ಕೆ ಕೆ ಪೇಜಾವರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶಶಿಕುಮಾರ್ ಪಂಡಿತ್, ಮಂಜುನಾಥ ಭಂಡಾರಿ, ಯತಿರಾಜ ಶೆಟ್ಟಿ, ವಸಂತ ಪೂಜಾರಿ, ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ರಾಜೇಶ್ ಸುವರ್ಣ, ಸೇಸಮ್ಮ ಬರ್ಕೆ, ಶಾಂತಿ ಉಪಸ್ಥಿತಲಿರುವರು. ರಾತ್ರಿ 10:30ರಿಂದ ಕೋರ್ದಬ್ಬು ಮತ್ತು ತನ್ನಿಮಾನಿಗ ದೈವಗಳ ನೇಮೋತ್ಸವ ಹಾಗೂ ಮೇ 9ರಂದು ಸಂಜೆ 6ರಿಂದ ಗುಳಿಗ ಪಂಜುರ್ಲಿ, ರಾಹುಗುಳಿಗ ದೈವಗಳ ನಮೋತ್ಸವ ಜರುಗಲಿದೆ.
ಜಾಗದ ಮಹಿಮೆ :
ಮಾಣಿಬೆಟ್ಟುವಿನಲ್ಲಿರುವ ದೊಡ್ಡ ಪಾದೆಯ(ಬಂಡೆಕಲ್ಲು) ಮೇಲೆ ಕಂಬೆರ್ಲು ಮತ್ತು ಉಳ್ಳಾಲ್ತಿ ದೈವಗಳಿಗೆ ಸೇವೆ ನಡೆಯುತ್ತಿದ್ದ ವೇಳೆಗೆ ಸ್ಥಳಕ್ಕೆ ಕೋರ್ದಬ್ಬು, ತನ್ನಿಮಾನಿಗ, ಗುಳಿಗ-ಪಂಜುರ್ಲಿ, ರಾಹು ದೈವಗಳ ಆಗಮನವಾಯಿತು. ಮುಂದೆ ಈ ದೈವಗಳಿಗೆ ಇಲ್ಲಿ ಸೇವೆ ನಡೆಯುತ್ತ ಬಂದಿದ್ದು, ಇದೊಂದು ಕಾರಣಿಕದ ಸ್ಥಳವಾಗಿ ಮಾರ್ಪಟ್ಟಿತ್ತು. ದೈವಗಳಿಗೆ ಸಾನಿಧ್ಯವಿಲ್ಲದ ಇಲ್ಲಿ ಪಾದೆಯ ಮೇಲೆಯೇ ವಾರ್ಷಿಕ ಪೂಜಾ ವಿಧಿ-ವಿಧಾನ ನಡೆಯುತ್ತ ಬಂದಿದೆ.
ಕೆಲವು ಸಮಯದ ಹಿಂದೆ ಇಲ್ಲಿಗೆ ಸಂಬಂಧಿಸಿದ ಪರಾರಿಯ ಮುಂಡಾಲ ಕುಟುಂಬವೊಂದು ದೋಷ ಪರಿಹಾರಾರ್ಥ ತಾಂಬೂಲ ಪ್ರಶ್ನೆ ಇಟ್ಟಾಗ ಗುರುಪುರದ ಶ್ರೀ ವೆಂಕಟರಮಣ ವರದರಾಜ ದೇವಸ್ಥಾನದ ಹಿಂದುಗಡೆ ಜೀರ್ಣಾವಸ್ಥೆಯಲ್ಲಿರುವ ಅತಿ ಪುರಾತನ ಶ್ರೀ ಕೋರ್ದಬ್ಬು ಸಾನಿಧ್ಯವೊಂದಿದ್ದು, ಅದರ ಜೀಣೋದ್ಧಾರದೊಂದಿಗೆ ಮುಂಡಾಲ ಕುಟುಂಬದ ದೋಷ ನಿವಾರಣೆಯಾಗಲಿದೆ ಎಂಬ ಸಮಾಧಾನ ಪ್ರಾಪ್ತಿಯಾಯಿತು. ಅದರಂತೆ ಕಾರ್ಯಪ್ರವೃತ್ತರಾದಾಗ ಗುರುಪುರ ಮಾಣಿಬೆಟ್ಟಿನಲ್ಲಿರುವ ಶ್ರೀ ಕೋರ್ದಬ್ಬು ಸಾನಿಧ್ಯದ ಪರಿಚಯವಾಯಿತು.
ಇದು ಮೂಲತಃ ಕಾರಮೊಗರುಗುತ್ತಿವಿನ ಜಾಗವಾಗಿದ್ದರೂ, ಭೂಸುಧಾರಣಾ ಕಾಯ್ದೆಯಂತೆ ಗಂಗಾಧರ ಸಪಲಿಗ ಕುಟುಂಬವು ಈ ಜಾಗದ ಒಡೆಯರಾಗಿದ್ದಾರೆ. ಐದು ತಿಂಗಳ ಹಿಂದೆ ಜಾಗದ ಗಂಗಾಧರ ಸಪಲಿಗ, ಮಾಣಿಬೆಟ್ಟುಗುತ್ತು ವಿನಯಕುಮಾರ್ ಶೆಟ್ಟಿ, ಕಾರಮೊಗರಗುತ್ತು ಹಾಗೂ ಬರ್ಕೆ ಗುತ್ತಿನ ಪ್ರಮುಖರ ಸಂಪರ್ಕಿಸಿ ಸಮಾಲೋಚಿಸಲಾಗಿ ಕೋರ್ದಬ್ಬು ದೈವಸ್ಥಾನ ನಿರ್ಮಿಸಲು ನಿರ್ಧರಿಸಲಾಯಿತು. ಹಿಂದೆ ಸಂಕಲ್ಪಿಸಿದಂತೆ ಸ್ಥಳದಲ್ಲಿ ಈಗ ಭವ್ಯ ಶ್ರೀ ಕೋರ್ದಬ್ಬು ಪರಿವಾರ ದೈವಗಳ ದೈವಾಲಯ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ.
ಜೀರ್ಣೋದ್ಧಾರ ಸಮಿತಿಯಲ್ಲಿ ವಿನಯಕುಮಾರ್ ಶೆಟ್ಟಿ(ಅಧ್ಯಕ್ಷ), ಶ್ರೀನಿವಾಸ ಆಳ್ವ ಮತ್ತು ಭಾಗ್ಯರಾಜ ಆಳ್ವ(ಗೌರವಾಧ್ಯಕ್ಷ), ಗಂಗಾಧರ ಸಪಲಿಗ, ನಳಿನಿ ಶೆಟ್ಟಿ ಮತ್ತು ದೀಪಕ್ ಬಂಗೇರ(ಉಪಾಧ್ಯಕ್ಷ) ಹಾಗೂ ಪದಾಧಿಕಾರಿಗಳಾಗಿ ನಾರಾಯಣ ಶೆಟ್ಟಿ ಬರ್ಕೆ ಗ್ರಾಪಂ ಸದಸ್ಯರಾದ ರಾಜೇಶ್ ಸುವರ್ಣ, ಸೇಸಮ್ಮ ಮತ್ತು ಶಾಂತಿ ಹಾಗೂ ಶ್ರೀನಿವಾಸ ಪರಾರಿ, ಸಂಜೀವ ಅಂಚನ್, ವಿನೋದ್ ಕುಮಾರ್, ಹರೀಶ್ ಸಪಲಿಗ ಮೊದಲಾದವರು ಒಳಗೊಂಡಿದ್ದಾರೆ.



