ಮೂಡುಬಿದಿರೆ: ಅನಾರೋಗ್ಯದಿಂದ ನಿಧನರಾದ ಎಂ.ಸಂಜೀವ ಮೊಯ್ಲಿ ಅವರಿಗೆ ಬ್ಲಾಕ್ ಕಾಂಗ್ರೆಸ್ ಮೂಡುಬಿದಿರೆ ಇದರ ವತಿಯಿಂದ ಮಂಗಳವಾರ ತುರ್ತು ಸಭೆಯ ಮೂಲಕ ಶ್ರದ್ಧಾಂಜಲಿಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಲ್ಲಿಸಲಾಯಿತು.

ಮಾಜಿ ಸಚಿವ ಕೆ.ಅಭಯಚಂದ್ರ ಮಾತನಾಡಿ, ಸಂಜೀವ ಮೊಯ್ಲಿಯವರೊಂದಿಗಿನ ತನ್ನ 45 ವರ್ಷಗಳ ರಾಜಕೀಯ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾ, ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಕೂಡ ಬಯಸದೆ ಓರ್ವ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ ಸದ್ದಿಲ್ಲದೆ ದುಡಿದವರು. ಯಾವುದೇ ಸಂದರ್ಭದಲ್ಲಿ ಪಕ್ಷದ ನಿಯಮ, ಶಿಸ್ತನ್ನು ಉಲ್ಲಂಘಿಸಿದವರಲ್ಲ. ಪಕ್ಷದ ರಾಷ್ಟ್ರ ಹಾಗೂ ರಾಜ್ಯದ ಹಿರಿಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೂ ಕೂಡ ಅಧಿಕಾರಕ್ಕಾಗಿ ಲಾಬಿ ಮಾಡಿದವರಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ ಸಹಿತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
