ಬಂಟ್ವಾಳ:  ಕೊಯಿಲ ಗ್ರಾಮದ ಕ್ವಾರ್ಟರ್ಸ್ ಎಂಬಲ್ಲಿ ಗೃಹಪ್ರವೇಶ ನಡೆಯುತ್ತಿರುವ ಮನೆ ಪಕ್ಕದಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಗೆ ಬಾಡೂಟ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಆಗಮಿಸಿ ಪರಿಶೀಲನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಇಲ್ಲಿನ ನಿವಾಸಿ ದಿವಂಗತ ಕೊರಗಪ್ಪ ಪೂಜಾರಿ ಎಂಬವರ ಪತ್ನಿ ದೇವಕಿ ಎಂಬವರು ತನ್ನ ಪುತ್ರ ಖರೀದಿಸಿದ ಐದು ಸೆಂಟ್ಸ್ ಜಮೀನಿನಲ್ಲಿ ನೂತನ ಮನೆ ನಿರ್ಮಿಸಿ ಗೃಹಪ್ರವೇಶ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಸಿದ್ದಾರೆ. ಇವರ ಮನೆಗೆ ಮಧ್ಯಾಹ್ನ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅವರು ಬಂದು ಹೋದ ಕೂಡಲೇ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಆಗಮಿಸಿದೆ. ಇಲ್ಲಿನ ಕಿರಿದಾದ ಅಂಗಳದಲ್ಲಿ ಸ್ಥಳಾವಕಾಶ ಇಲ್ಲದೆ ಪಕ್ಕದ ಮನೆಯ ಅಂಗಳದಲ್ಲಿ ಸಸ್ಯಾಹಾರ ಅಡುಗೆ ಸಿದ್ಧಪಡಿಸಿ ಹೊಸ ಮನೆಯ ಅಂಗಳದಲ್ಲಿ ಊಟೋಪಚಾರ ನೀಡಲಾಗಿತ್ತು.

12btl-Koila

ಆದರೆ ಇಲ್ಲಿನ ಗೃಹಪ್ರವೇಶದ ಸಮೀಪದ ಮನೆಯಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಗೆ ಬಾಡೂಟ ನೀಡಲಾಗುತ್ತಿದೆ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗಳ ತಂಡಕ್ಕೆ ಕಿಡಿಗೇಡಿಗಳು ತಪ್ಪು ಮಾಹಿತಿ ನೀಡಿದ್ದರು. ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ರೀತಿಯ ಬಾಡೂಟ ನೀಡಿರುವುದು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.  ಒಟ್ಟಿನಲ್ಲಿ ಗೃಹಪ್ರವೇಶದಂತೆ ಶುಭ ಕಾರ್ಯಕ್ರಮಕ್ಕೆ ಚುನಾವಣಾ ಅಧಿಕಾರಿಗಳನ್ನು ಅನಗತ್ಯವಾಗಿ ಕಳುಹಿಸಿ ಕೀಳು ಮಟ್ಟದ ರಾಜಕೀಯದಿಂದ ಸಂತಸ ಪಡುವ ವಿಘ್ನ ಸಂತೋಷಿಗಳ ಬಗ್ಗೆ ಇಲ್ಲಿನ ಮನೆಯವರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *