ಮೂಡಬಿದಿರೆ: ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಜರುಗಿದ 15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿ ಭಾನುವಾರದಂದು ವೈಭವಪೂರ್ಣವಾಗಿ ಕೊನೆಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಜ್ಞಾನಪೀಠ ಪುರಸ್ಕøತ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ನಾವಿಂದು ನಮ್ಮ ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ನೀಡಿದರೂ, ಅದು ಸಾರ್ಥಕ್ಯವಾಗುತ್ತಿದೆಯಾ ಎಂದು ವಿಮರ್ಶಿಸಿಕೊಳ್ಳುವ ಅನಿವಾರ್ಯತೆ ಒದಗಿದೆ. ಕಾರಣ ಬ್ರಿಟೀಷರು ನಮ್ಮವರ ಅಪೇಕ್ಷೆಯ ಮೇರೆಗೆ ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಆರಂಭಿಸಿ, ನಂತರ ನಮ್ಮ ಸಂಸ್ಕøತಿಯನ್ನೇ ಸತ್ವರಹಿತವಾದದ್ದು ಎಂದು ಹೇಳಿದಾಗ ನಾವ್ಯಾರು ಪ್ರಶ್ನಿಸಲಿಲ್ಲ. ನಮ್ಮ ಇತಿಹಾಸಗಳಂತಿದ್ದ ರಾಮಾಯಣ, ಮಹಾಭಾರತವನ್ನು ಕಟ್ಟುಕಥೆಯಂತೆ ಬಿಂಬಿಸಿದಾಗಲೂ ನಾವು ಏನೂ ಹೇಳಲಿಲ್ಲ. ಇದರಿಂದ ಅವರು ನಮ್ಮನ್ನು ನಮ್ಮದೇ ಪರಂಪರೆಗೆ ಪರಕೀಯರಾಗುವಂತೆ ಮಾಡಿದ್ದಾರೆ. ಭಾರತೀಯರಲ್ಲಿ ಅನಾದಿ ಮತ್ತು ಪ್ರಸ್ತುತದ ನಡುವಿದ್ದ ಕೊಂಡಿಯನ್ನು ಕತ್ತರಿಸಿದ್ದಾರೆ. ಇದರಿಂದ ನಮ್ಮದು ತಂದೆ ಇಲ್ಲದ ಸಂಸ್ಕøತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರೋಪ ಭಾಷಣ ಮಾಡಿದ 15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ .ಎಸ್ ಘಂಟಿ “ನಮ್ಮ ಕಡೆ ಒಂದು ಮಾತಿದೆ, ಮನಸ್ಸು ತುಂಬಿದರೆ ಮಾತು ಹೊರಢೊದಿಲ್ಲ ಎಂದು. ಅದರಂತೆ ಈ ನುಡಿಸಿರಿಗೆ ಸಾಕ್ಷಿಯಾಗಿ ನನಗೆ ಮಾತುಗಳೇ ಹೊರಡುತ್ತಿಲ್ಲ. ಇಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳಿಂದ ಬಹು ದೊಡ್ಡ ಸಂಪತ್ತು ನನ್ನ ಪಾಲಿಗೆ ದೊರೆತಿದೆ. ಕೇಂದ್ರ ಆಶಯಕ್ಕನುಗುಣವಾಗಿ ಕರ್ನಾಟಕದ ಬಹುರೂಪಿ ಆಯಾಮಗಳನ್ನು ಪರಿಚಯಿಸುವಲ್ಲಿ, ಒಡಮೂಡಿಸುವಲ್ಲಿ ನುಡಿಸಿರಿ ಯಶಸ್ವಿಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 12 ಸಾಧಕರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನುಡಿಸಿರಿಯ ಭಾಗವಾಗಿ ಮೂರು ದಿನಗಳ ಕಾಲ ನಡೆದ 10 ವಿಚಾರಗೋಷ್ಠಿಗಳು, 8 ಕವಿಸಮಯ- ಕವಿನಮನ, 8 ಉಪನ್ಯಾಸಗಳು, 2 ಕಿರುನಾಟಕ ಹಾಗೂ ಇಬ್ಬರು ವ್ಯಕ್ತಿಗಳ ಕಥೆಗಳು ಎಲ್ಲವೂ ಬಹುರೂಪಿ ಆಯಾಮವನ್ನೇ ಅವಲಂಬಿಸಿತ್ತು. ಜಗತ್ತು ಬಣ್ಣ ಬಣ್ಣದ ಬಟ್ಟೆಯನ್ನು ಬಯಸುತ್ತದೆ. ಅದು ಎಲ್ಲಾ ರೀತಿಯಿಂದಲೂ ಆಕರ್ಷಕವಾಗಿರಬೇಕು ಎಂದು ಬೇಡುತ್ತದೆ. ಅದರಂತೆ ಜನರ ಮನಸ್ಥಿತಿಗೆ ಅನುಗುಣವಾಗಿ ಜತನದಿಂದ ಹೆಣೆದ ಸುಂದರ ವಸ್ತ್ರವೇ ನುಡಿಸಿರಿ ಎಂದು ಡಾ. ಘಂಟಿ ತಿಳಿಸಿದರು.
ನುಡಿಸಿರಿಯ ಸಮಾರೋಪ ಸಮಾರಂಭದಂದು ಜ್ಞಾನಪೀಠ ಪುರಸ್ಕøತ ಡಾ. ಚಂದ್ರಶೇಖರ ಕಂಬಾರ್ ಹಾಗೂ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಎಸ್ ಘಂಟಿಯನ್ನು ಸಮ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ 15ನೇ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಗಣ್ಯರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಶಾಲು, ಫಲ-ಪುಷ್ಪ, 25000 ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಸಮಾರಂಭದಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ವಿಧಾನ ಪರೊಷತ್ ಸದಸ್ಯ ಗಣೇಶ್ ಕಾರ್ಣಿಕ್, ಎಸ್. ಎಲ್. ಬೋಜೇಗೌಡ ಮತ್ತಿತ್ತರರು ಉಪಸ್ಥಿತರಿದ್ದರು.


