ಬಡಗಬೆಳ್ಳೂರು : ಕ್ಯಾನ್ಸರೆಂದು ಭೀತಿಪಡುವ ಅಗತ್ಯವಿಲ್ಲ. ಆರಂಭದಲ್ಲೇ ಈ ರೋಗ ಪತ್ತೆ ಹಚ್ಚಿದರೆ ಚಿಕಿತ್ಸೆ ಸುಲಭ. ಇದೊಂದು ವಯಸ್ಸಿನ ಕಾಯಿಲೆಯಾಗಿದ್ದು, ವಯಸ್ಸಾದಂತೆ ವೃದ್ಧಿಯಾಗುತ್ತದೆ. ಕ್ಯಾನ್ಸರ್ ನಿಯಂತ್ರಿಸಲು ಈಗ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ರೋಗ ಬರದಂತೆ ಪೂರ್ವದಲ್ಲೇ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಕ್ಯಾನ್ಸರ್ ತಜ್ಞ ಡಾ. ಡಿ. ಸುರೇಶ್ ರಾವ್ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು.
ಅವರು ಮಂಗಳೂರು ಪಂಪ್ವೆಲ್ಲಿನ ಇನ್ಸ್ಟಿಟ್ಯೂಟ್ ಆಫ್ ಅಂಕಾಲಾಜಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ನ. 11ರಂದು ಬಡಗಬೆಳ್ಳೂರಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಕ್ಯಾನ್ಸರ್ ಬಗ್ಗೆ ಮಾಹಿತಿ ಮತ್ತು ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದಲ್ಲಿ ಚಿಕಿತ್ಸೆ ಲಭ್ಯವಿದೆ. ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಹೇಳಿಕೊಳ್ಳಲಾಗದ ಭೀತಿ, ಮುಜುಗರವಿದೆ. ಅದರಿಂದ ರೋಗ ಉಲ್ಭಣಗೊಳ್ಳುತ್ತದೆ. ಇಂತಹ ಶಿಬಿರಗಳ ಮೂಲಕ ಜನರಲ್ಲಿರುವ ಸಂಕೋಚ, ಭೀತಿ ನಿವಾರಣೆ ಸಾಧ್ಯವಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಡಾ. ಪ್ರತಿಮಾ ರಾವ್,ರಘುರಾಮ್ ಭಟ್, ಅನಂತರಾಮ್ ಹೇರಳ,ನಂದರಾಮ ರೈ, ಗಂಗಾಧರ ರೈ,ಸಿಲ್ವೆಸ್ಟರ್ ಡಿ’ಸೋಜ,ಇನ್ಸ್ಟಿಟ್ಯೂಟ್ ಆಫ್ ಅಂಕಾಲಾಜಿ ಕ್ಯಾನ್ಸರ್ ಆಸ್ಪತ್ರೆ ವೈದ್ಯಾಧಿಕಾರಿಗಳು ಮೊದಲಾದವರಿದ್ದರು.
ಶಿಬಿರದಿಂದ 50ಕ್ಕೂ ಹೆಚ್ಚು ಮಂದಿ ಉಚಿತ ಕ್ಯಾನ್ಸರ್ ತಪಾಸಣೆ ಮಾಡಿಕೊಂಡರು.
ಹಾಲು ಉತ್ಪಾದಕ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ಎನ್ ಶೆಟ್ಟಿ ಸ್ವಾಗತಿಸಿದರು. ಜೆನೆಟ್ ರೊಸಾರಿಯೋ ಕಾರ್ಯಕ್ರಮ ನಿರೂಪಿಸಿದರು. ಪ್ರವೀನಾ ಟಿ. ರೈ ವಂದಿಸಿದರು.

