ಬಂಟ್ವಾಳ: ಮಾದಕ ದ್ರವ್ಯ ಸೇವನೆ ಯುವಜನತೆಯ ದೇಹ ಮತ್ತು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂದು ಬಂಟ್ವಾಳ ನಗರ ಆರಕ್ಷಕ ಠಾಣೆ ಸಬ್‍ಇನ್ಸ್‍ಪೆಕ್ಟರ್ ಬಿ. ಟಿ. ಚಂದ್ರಶೇಖರ್ ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ವಿ.ಎಸ್. ಪ.ಪೂ.ಕಾಲೇಜು ಮತ್ತು ಬಂಟ್ವಾಳ ನಗರ ಆರಕ್ಷಕ ಠಾಣೆ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮಾದಕ ದ್ರವ್ಯ ವ್ಯಸನಗಳು, ರ್ಯಾಗಿಂಗ್ ಮತ್ತು ರಸ್ತೆ ಸುರಕ್ಷತಾ ನಿಯಮಗಳು- ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

DRUGS AWARENESS PROGRAMME-2018 (2)
ಗಾಂಜಾ, ಆಫೀಮು ಮತ್ತು ಮದ್ಯಪಾನ ಧೂಮಪಾನದಂತ ಮಾರಕ ವಸ್ತುವನ್ನು ಕೆಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶೋಕಿಗಾಗಿ ಬಳಸುತ್ತಿದ್ದಾರೆ. ಕೆಟ್ಟ ಚಟ ವಿದ್ಯಾರ್ಥಿಯ ದೈಹಿಕ ಮತ್ತು ಮಾನಸಿಕ ಕಿನ್ನತೆಗೆ ಕಾರಣವಾಗುತ್ತದೆ. ಇದು ಶೈಕ್ಷಣಿಕವಾಗಿಯೂ ಪರಿಣಾಮ ಬೀರುತ್ತದೆ. ಅಮಲು ಪದಾರ್ಥಗಳ ಸೇವನೆ ಆರ್ಥಿಕ ದಿವಾಳಿತನ ಮತ್ತು ಅಪರಾಧಗಳಿಗೆ ಎಡೆಮಾಡಿಕೊಡುತ್ತದೆ. ಯುವಪೀಳಿಗೆ ಮಾದಕ ವ್ಯಸನಕ್ಕೆ ತುತ್ತಾಗಿ ಜ್ಞಾಪಕ ಶಕ್ತಿ ಕಳೆದುಕೊಂಡು ಬದುಕಿನುದ್ದಕ್ಕೂ ನರಕ ಯಾತನೆ ಅನುಭವಿಸುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯುವಜನತೆ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒತ್ತು ಕೊಟ್ಟು ಗುರುಹಿರಿಯರ ಮಾರ್ಗದರ್ಶನ ಪಾಲಿಸಿ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕಬೇಕು. ವಿದ್ಯಾರ್ಥಿ ಶಿಕ್ಷಕರು ಮತ್ತು ಪೋಷಕರ ಎಚ್ಚರಿಕೆ ಮಾತನ್ನು ಕಡೆಗಣಿಸದೇ ಮಾದಕ ವಸ್ತು ಸೇವನೆ ತಡೆಗಟ್ಟಲು ಎಲ್ಲರೊಂದಿಗೆ ಒಮ್ಮತದಿಂದ ಸಹಕಾರಿಸಬೇಕು ಎಂದು ಹೇಳಿದರು.

DRUGS AWARENESS PROGRAMME-2018 (1)
ಎಸ್.ವಿ.ಎಸ್. ಪ.ಪೂ.ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಶ್ಚಟಗಳು ಸಮಾಜದಲ್ಲಿ ಕಾಣುವ ಮಾರಕ ಪಿಡುಗು. ಸಮಯ ಕಳೆಯಲು, ಮನರಂಜನೆಯ ಬದುಕನ್ನು ಸಾಧಿಸಲು ಬಳಸುವ ಮಾದಕ ವಸ್ತುಗಳು ಯುವಜನತೆಯ ಭವಿಷ್ಯವನ್ನು ನಾಶಮಾಡುತ್ತದೆ. ಸಮಾಜದ ಸ್ವಾಸ್ಥ್ಯಕ್ಕೆ ದೇಹ ಮತ್ತು ಮನಸ್ಸು ಶುದ್ಧವಾಗಿರಬೇಕು. ಯಾವುದೇ ವಿದ್ಯಾರ್ಥಿ ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾಗದೆ ಅಥವಾ ಕಾರಣೀಭೂತರಾಗಿರದೇ ಸುರಕ್ಷತೆಯ ಅರಿವು ಹೊಂದಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ನಗರ ಆರಕ್ಷಕ ಠಾಣೆ ಹೆಡ್ ಕಾನ್‍ಸ್ಟೆಬಲ್ ಕೃಷ್ಣ ಕುಲಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ನಗರ ಆರಕ್ಷಕ ಠಾಣೆ ಸಿಬ್ಬಂದಿ ವರ್ಗದವರಾದ ವಿಜಯ ಗೌಡ ಕೆ. ಮತ್ತು ಎಸ್.ವಿ.ಎಸ್. ಪ.ಪೂ.ಕಾಲೇಜಿನ ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಗಣಿತಶಾಸ್ತ್ರ ಉಪನ್ಯಾಸಕಿ ಕವಿತಾ ಸ್ವಾಗತಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ಮಾಯಿಲ ಕೆ. ವಂದಿಸಿ, ಸಂಖ್ಯಾಶಾಸ್ತ್ರ ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *