ಮೂಡುಬಿದಿರೆ: ಶಿಕ್ಷಣದಲ್ಲಿ ವಿಜ್ಞಾನ, ವಾಣಿಜ್ಯ ವಿಷಯಗಳೇ ಮುಖ್ಯ ಎಂಬ ಭ್ರಮೆಯಿದೆ. ಮಾರುಕಟ್ಟೆಯ ಮನೋಧರ್ಮ ಶಿಕ್ಷಣ ಕ್ಷೇತ್ರಕ್ಕೂ ಆವರಿಸಿದೆ. ಇಂದು ಅದೊಂದು ಅಪಾಯಕಾರಿ ಸಂಗತಿ. ಧನಾತ್ಮಕವೂ ಮಾನವೀಯವೂ ಆದ ಮನಸ್ಸನ್ನು ರೂಪಿಸಲು ಭಾಷಾ ಸಾಹಿತ್ಯ ಬೋಧನೆ ಪರಿಣಾಮಕಾರಿ ಮಾಧ್ಯಮ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಹೇಳಿದರು.
ವಿದ್ಯಾಗಿರಿಯ ಶಿವರಾಮ ಕಾರಂತ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘ(ವಿಕಾಸ)ದ ವತಿಯಿಂದ ನಡೆದ ಪದವಿ ಕನ್ನಡ ಪಠ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪದವಿ ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ಬಿ.ಶಿವರಾಮ ಶೆಟ್ಟಿ ಮಾತನಾಡಿ, ಭಾಷಾ ಪಠ್ಯವೆಂದರೆ ಕೇವಲ ಭಾಷೆ ಅಥವಾ ಸಾಹಿತ್ಯವಲ್ಲ. ಜ್ಞಾನ ಶಿಸ್ತಾಗಿ ಪಠ್ಯವನ್ನು ರೂಪಿಸಬೇಕಾಗಿದೆ. ಪಠ್ಯವನ್ನು ನೋಡುವ ಕ್ರಮ ಬದಲಾಗಬೇಕಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು. ವಿಕಾಸದ ಅಧ್ಯಕ್ಷ ಪೆÇ್ರ.ಕೃಷ್ಣಮೂರ್ತಿ ಪ್ರಸ್ತಾವನೆಗೈದರು. ಕಾರ್ಯಾದರ್ಶಿ ಡಾ.ಯೋಗೀಶ ಕೈರೋಡಿ ಸ್ವಾಗತಿಸಿದರು. ಉಡುಪಿ, ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳ 91 ಮಂದಿ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು.
