ಮೂಡಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹಾಗೂ ಕಾಳಜಿಯ ಜವಾಬ್ದಾರಿಯಲ್ಲಿ ಒಂದು ಹೆಜ್ಜೆ ಮುಂದೆ ಸಾಗಿ, ‘ಸತ್ಕಾರ್ಯಕ್ಕಾಗಿ ಕೊಡುಗೆ’ ಎಂಬ ದ್ಯೇಯ ವಾಕ್ಯದಡಿ ‘ಕಾಗದ ಉಳಿಸಿ, ಹಸಿರು ಬೆಳಸಿ’ ಎಂಬ ವಿನೂತನ ಅಭಿಯಾನವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಈ ಅಭಿಯಾನದ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಳಸಿದ ಹಾಗೂ ಬಳಸದ ಕಾಗದಗಳು, ಕಥೆ, ಕವನ, ಕಾದಂಬರಿ, ಪುಸ್ತಕ, ನಿಯತಕಾಲಿಕೆ, ಪಠ್ಯಪುಸ್ತಕಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಬಳಸಲು ಯೋಗ್ಯವಾದ ಸಂಗ್ರಹಗಳನ್ನು ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಲಾಗುತ್ತದೆ. ಮರುಬಳಕೆಗೆ ಯೋಗ್ಯವಾದ ಕಾಗದದ ಸಂಗ್ರಹವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಂಜಿನಿಯರಿಂಗ್ ಕಾಲೇಜಿನ ಮ್ಯಾಕ್ಯನಿಕಲ್ ವಿಭಾಗದದವರ ಸಹಾಯದಿಂದ ಮರುಬಳಕೆಗೆ ಮಾಡಿ ಅವುಗಳನ್ನು ಅಗತ್ಯವಿರುವ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಉಚಿತವಾಗಿ ನೀಡಲಾಗುತ್ತದೆ. ಕಾಗದದ ಮರುಬಳಕೆ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು ನೀಗಿಸಲು ಕೊಡುಗೆ ನೀಡುವ ಎಲ್ಲಾ ದಾನಿಗಳಿಂದ ಒಂದು ರೂಪಾಯಿಯಂತೆ ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ. ಈ ಪ್ರಕ್ರಿಯೆಗೆ ಸಹಕಾರಿಯಾಗಲು ಎಲ್ಲಾ ಕಾಲೇಜು ಕಾರ್ಯಲಯಗಳಲ್ಲಿ ಹಾಗೂ ಕಾಲೇಜಿನ ಎಲ್ಲಾ ವಸತಿ ಗೃಹಗಳಲ್ಲಿ ನಾಲ್ಕು ಪೆಟ್ಟಿಗೆಯನ್ನು ಇಡಲಾಗುವುದು. ಒಂದು ಪೆಟ್ಟಿಗೆಯಲ್ಲಿ ಬಳಸಿದ ಕಾಗದಕ್ಕಾಗಿ, ಇನ್ನೊಂದು ಪೆಟ್ಟಿಗೆಯಲ್ಲಿ ಬಳಸದ ಕಾಗದಕ್ಕಾಗಿ, ಮತ್ತೊಂದು ಪೆಟ್ಟಿಗೆಯಲ್ಲಿ ಪುಸ್ತಕ, ಕವನ, ಕಾದಂಬರಿಗಳನ್ನು, ಹಾಗೂ ಇನ್ನೊಂದು ಪೆಟ್ಟಿಗೆಯಲ್ಲಿ ಒಂದು ರೂಪಾಯಿಯ ದೇಣಿಗೆ ಸಂಗ್ರಹಿಸಲು ಬಳಸಲಾಗುತ್ತದೆ.
ಈ ಅಭಿಯಾನವು ಕಾಲೇಜಿನ ‘’ಗ್ರೀನ್ ಝೋನ್’’ ಫೋರಂನ ಮೂಲಕ ಆಯೋಜಿಸಲಾಗಿದೆ. ಈ ಫೋರಂ ನಲ್ಲಿ ಆಳ್ವಾಸ್ ಪದವಿ ಕಾಲೇಜಿನ ಬಿಎಸ್‍ಡಬ್ಲ್ಯೂ ಹಾಗೂ ಬಿಬಿಎ ವಿಭಾಗದ 60 ವಿದ್ಯಾರ್ಥಿಗಳು ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಪರಿಸರ ಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಈ ವೇದಿಕೆ ಬೆಂಗಳೂರಿನ ಸೆಂಟರ್ ಫಾರ್ ಎನ್ವಿರಾನಮೆಂಟ್ ಎಜುಕೇಶನ್, ಯಲಹಂಕ ಇದರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಬಿಎಸ್‍ಡಬ್ಲ್ಯೂ ವಿಭಾಗದ ಉಪನ್ಯಾಸಕಿ ಪವಿತ್ರಾಪ್ರಸಾದ್ ಹಾಗೂ ಬಿಬಿಎ ವಿಭಾಗದ ನಿಶಾ ಕೆ ಈ ವೇದಿಕೆಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನೀವು ತ್ಯಾಜ್ಯ ಎನ್ನುವುದು ಇತರರಿಗೆ ಉಪಯುಕ್ತವಾಗಲಿ’ ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಪ್ರಾರಂಬಿಸಿದ್ದು, ಮುಂದಿನ ದಿನಗಳಲ್ಲಿ ಈ ವೇದಿಕೆಯ ಮೂಲಕ ಇನ್ನೂ ಹಲವು ಪರಿಸರ ಹಾಗೂ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬರಲಿದೆ. ‘’ವೇಸ್ಟ್ ಫ್ರೀ ಹಾಸ್ಟೆಲ್ ಮೆಸ್ ಫುಡ್ ’’ ಎಂಬ ಇನ್ನೊಂದು ಅಭಿಯಾನವನ್ನು ಸದ್ಯದಲ್ಲೆ ಪ್ರಾರಂಭಿಸಲಾಗುವುದು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ಕುರಿಯನ್ ತಿಳಿಸಿದರು.
