ಮೂಡುಬಿದಿರೆ: ಕಾಂತಾವರ ಕನ್ನಡ ಸಂಘ ಮತ್ತು ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ನಡೆದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು ‘ಕುಮಾರವ್ಯಾಸನ ದೇಸಿ’ ಎಂಬ ವಿಷಯದ ಬಗ್ಗೆ ಪ್ರಸಿದ್ಧ ಯಕ್ಷಗಾನ ಕಲಾವಿದರು, ವಿದ್ವಾಂಸರೂ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಆಗಿರುವ ಮೋಹನ ಭಾಸ್ಕರ ಹೆಗಡೆಯವರು ಮಾತನಾಡಿದರು.
ಕನ್ನಡದಲ್ಲಿ ಅನೇಕ ಮಹಾನ್ ಕವಿಗಳು ಆಗಿ ಹೋಗಿದ್ದರೂ ಯಾರ ಹಂಗಿಗೂ ಒಳಪಡದೆ ಆಡಂಬರಕ್ಕಲ್ಲದೆ ಆಪ್ತತೆಗೆ ಒಲಿದ ಜನಮಾನಸದ ಸರ್ವಶ್ರೇಷ್ಠ ಮಹಾಕವಿಯಾಗಿ ಕುಮಾರವ್ಯಾಸನು ಕಾವ್ಯಲೋಕದಲ್ಲಿ ಗುರುತಿಸಲ್ಪಟ್ಟಿದ್ದಾನೆ. ಇತರರಿಗೆ ಶ್ರೇಷ್ಠವಾಗಿ ಕಂಡ ಸಂಗತಿಗಳೆಲ್ಲವನ್ನೂ ಕುಮಾರವ್ಯಾಸನು ಪರಿಗಣಿಸದೆ ತನ್ನ ಸುತ್ತಮುತ್ತಲಿನ ಸಣ್ಣಪುಟ್ಟ ಸಂಗತಿಗಳನ್ನೇ ಶ್ರೇಷ್ಠ ಸರಕುಗಳನ್ನಾಗಿ ಪರಿಗಣಿಸಿ ಇಡೀ ಕರ್ನಾಟಕ ಮಾತ್ರವಲ್ಲ ಭಾರತವನ್ನೇ ತನ್ನ ಕಾವ್ಯದಲ್ಲಿ ಸೆರೆಹಿಡಿದಿದ್ದಾನೆ.
ಜನರ ದೈನಂದಿನ ಬದುಕೇ ಆತನ ಕಾವ್ಯದಲ್ಲಿ ಮಿಳಿತವಾಗಿದ್ದು ಭ್ರಾಮಕ ಲೋಕಕ್ಕೆ ಜನರನ್ನು ಎಳೆಯದೆ ಜನರ ಮನೋಮಟ್ಟವನ್ನು ಸರಿಯಾಗಿ ಅರ್ಥೈಸಿಕೊಂಡು ಜನಹಿತವನ್ನೇ ಬಯಸಿದ ಕವಿಯಾಗಿ ಗುರುತಿಸಲ್ಪಡುವ ಕುಮಾರವ್ಯಾಸನ ದೇಸಿ ಚಿಂತನೆ ವಿಸ್ತಾರವಾದುದು. ತಳಸ್ಪರ್ಶಿಯಾದ ದೇಸೀಯ ಕಲ್ಪನೆಯಲ್ಲಿ ತನ್ನ ಅದ್ಭುತ ಲಯಗಾರಿಕೆಯ ಕಾವ್ಯವನ್ನು ಕಡೆದಂತಹ ಮಹಾಶಿಲ್ಪಿಯು ದೇಸೀ ಚಿಂತನೆಯನ್ನು ಮೈಗೂಡಿಸಿಕೊಂಡ ಮಹಾಕವಿ ಎನ್ನುವುದು ಸ್ಪಷ್ಟವಾಗುತ್ತದೆ. ಆಪ್ತವಾಗಿ ಕಟ್ಟಿಕೊಟ್ಟ ಇಂತಹ ಕೃತಿ ಇಂದಿಗೂ ಅನೇಕ ಕುಟುಂಬಗಳಲ್ಲಿ ನಿತ್ಯ ವಾಚಿಸಲ್ಪಡುತ್ತಿದೆ ಅನ್ನುವುದೇ ಅದರ ಶ್ರೇಷ್ಠತೆಯನ್ನು ಸೂಚಿಸುತ್ತದೆ’ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಆಕಾಶವಾಣಿಯ ಕಲಾವಿದೆ ಶ್ರೀಮತಿ ವಾಸಂತಿ ರಮೇಶ್ ಶೆಣೈ ಇವರಿಂದ ಕುಮಾರವ್ಯಾಸ ಭಾರತದ ಆಯ್ದ ಪದ್ಯಗಳ ವಾಚನ ಕಾರ್ಯಕ್ರಮ ನೆರವೇರಿತು. ಅತಿಥಿಗಳೀರ್ವರನ್ನೂ ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಾಬುಶೆಟ್ಟಿ ನಾರಾವಿಯವರು ಕಾರ್ಯಕ್ರಮ ನಿರ್ವಹಿಸಿದರು. ಕನ್ನಡಸಂಘದ ಸ್ಥಾಪಕಾಧ್ಯಕ್ಷರಾದ ಡಾ. ನಾ.ಮೊಗಸಾಲೆ ಮತ್ತು ಉಡುಪಿ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷರಾದ ನಿರಂಜನ ಮೊಗಸಾಲೆಯವರು ಸ್ವಾಗತಿಸಿ ಸದಾನಂದ ನಾರಾವಿಯವರು ವಂದಿಸಿದರು.

