ಕುಪ್ಪೆಪದವು: ಕುಳವೂರು ಬಳ್ಳಾಜೆ ಶ್ರೀ ಸತ್ಯ ಸಾರಮನಿ ಸೇವಾ ಸಮಿತಿ ಮತ್ತು ಡಾ.ಅಂಬೇಡ್ಕರ್ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಳ್ಳಾಜೆ ಅಂಬೇಡ್ಕರ್ ಸಮಾಜ ಭವನದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಗಂಗಾಧರ ಕೆ.ಅಧ್ಯಕ್ಷತೆ ವಹಿಸಿದ್ದರು.
ಆಟಿ ತಿಂಗಳು ಅಶುಭವಲ್ಲ, ಅದೂ ಎಲ್ಲ ತಿಂಗಳಂತೆ ಪವಿತ್ರವಾದುದು. ಅಶುಭ ಎಂಬ ನೆಪದಲ್ಲಿ ಇಂದಿಗೂ ಒಳ್ಳೆಯ ಕೆಲಸಕ್ಕೆ ಹೋಗಲು ಹಿಂದೇಟು ಹಾಕುವುದು, ಶುಭ ಕಾರ್ಯಕ್ರಮಗಳನ್ನು ಮುಂದೂಡುವುದು ನ್ಯಾಯೋಚಿತವಲ್ಲ. ಆಟಿಯ ಹೆಸರಿನಲ್ಲಿ ಅನೇಕ ಮೂಢನಂಬಿಕೆಗಳನ್ನು ಹಿಂದಿನಿಂದಲೂ ಹೇರಿಕೊಂಡು ಬರಲಾಗಿದೆ. ಆದರೆ ಆಟಿಯಲ್ಲಿರುವ ಉತ್ತಮ ಅಂಶಗಳನ್ನು ಮಾತ್ರ ನಾವು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ.
ಅಂದಿನ ಬಡತನ ಬದುಕು ಮತ್ತು ಪ್ರಾಕೃತಿಕ ಅಸಮತೋಲನದ ಹಿನ್ನಲೆಯಲ್ಲಿ ಶುಭ ಕಾರ್ಯಗಳನ್ನು ನಮ್ಮ ಹಿರಿಯರು ಸಹಜವಾಗಿಯೇ ಮುಂದೂಡಿದ್ದರು ಎಂಬ ವಾಸ್ತವಿಕತೆಯನ್ನು ನಾವು ಅರಿಯಬೇಕಾಗಿದೆ. ಪ್ರಕೃತಿದತ್ತವಾಗಿ ಸೃಷ್ಠಿಯಾದ ಸಮಸ್ಯೆಗೆ ಪ್ರಕೃತಿಯಲ್ಲೇ ಪರಿಹಾರ ಕಂಡುಕೊಂಡ ತಿಂಗಳು ಅಂದರೆ ಆಟಿ ತಿಂಗಳು. ಅದರ ಹೆಸರಿನಲ್ಲಿ ನಡೆಯುವ ಇಂದಿನ ಆಚರಣೆಗಳು ನಮಗೆ ಪ್ರಕೃತಿಯೆಡೆ ಮುಖ ಮಾಡಿ ಬದುಕಲು ಪ್ರೇರಣೆ ನೀಡಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಸದಸ್ಯ ಬಿ.ಗಣೇಶ್ ನಾಯಕ್, ದಲಿತ ಹಿತರಕ್ಷಣಾ ವೇದಿಕೆ ಸಂಚಾಲಕ ಸತೀಶ್ ಅರಳ, ಪ್ರಮುಖರಾದ ಕೊರಗ, ಈಶ್ವರ ಅಟ್ಟೆಪದವು, ಸತೀಶ್ ಬಳ್ಳಾಜೆ, ಶೇಖರ್ ನೇಲಲಚ್ಚಿಲು, ಅಭಿನಂದನ್ ಕೊಕ್ರಾಡಿ ಅತಿಥಿಗಳಾಗಿ ಭಾಗವಹಿಸಿದರು. ಮಿಥುನ್ ರಾಜ್ ಸ್ವಾಗತಿಸಿದರು. ರವಿ ಅಟ್ಟೆಪದವು ವಂದಿಸಿದರು. ಅನಿಲ್ ಮತ್ತು ಹೊನ್ನಯ ಕಾರ್ಯಕ್ರಮ ನಿರೂಪಿಸಿದರು.

