ಪೊಳಲಿ : ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಆವರಣದಲ್ಲಿ ಮನಮಹೋತ್ಸವ ಆಚರಿಸಲಾಯಿತು.
ಶಾಲೆಯ ಆವರಣದ ಸುತ್ತಲು ನೆಡಲು ಬೆಲೆಬಾಳುವ ಸಸಿಗಳನ್ನು ನೀಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಸಹ್ಯಾದ್ರಿ ಕಾಲೇಜಿನ ನಿರ್ದೇಶಕ ಅಮ್ಮುಂಜೆಗುತ್ತು ದೇವದಾಸ ಹೆಗ್ಡೆ ಮಾತನಾಡುತ್ತ, ಸಸಿ ನೆಟ್ಟರೆ ಸಾಲದು, ಅದನ್ನು ಪೋಷಿಸಿ ಬೆಳೆಸಬೇಕು. ಮರದ ಪ್ರಯೋಜನ ಅನನ್ಯ. ಸ್ವಾತಂತ್ರ್ಯೋತ್ಸವದಂದು ಶಾಲಾ ಮಕ್ಕಳಿಗೆ ಇನ್ನಷ್ಟು ಸಸಿಗಳನ್ನು ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಸಸಿ ನೆಡುವುದರಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ನೆಟ್ಟ ಗಿಡ ಪೋಷಿಸಬೇಕು. ಆಗಲೇ ಅದರ ಸದುಪಯೋಗ ಸಿಗುತ್ತದೆ ಎಂದು ಅಮ್ಮಂಜೆ ಗ್ರಾಪಂ ಉಪಾಧ್ಯಕ್ಷ ವಾಮನ ಆಚಾರ್ಯ ಹೇಳಿದರು.
ಪೊಳಲಿ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಅಬೂಬಕ್ಕರ್ ಮಾತನಾಡುತ್ತ, ನಾವು ಬದುಕಿರುವಾಗ ಸಾಕಷ್ಟು ಗಳಿಸುತ್ತೇವೆ, ಸಂಗ್ರಹಿಸಿಡುತ್ತೇವೆ. ಅವೆಲ್ಲ ನಮ್ಮ ವ್ಯಕ್ತಿತ್ವ ನೆನಪಿಡುವ ಸಂಗತಿಯಾಗದೆ ಮುಂದೊಂದು ದಿನ ಗೌಣವಾಗುತ್ತವೆ. ನಾವು ಒಂದು ಸಸಿ ನೆಟ್ಟು ಬೆಳೆಸಿದರೆ ಅದು ಇತರರಿಗೆ ನೆರಳು ಕೊಡುತ್ತದೆ. ಆ ಮರ ಕಂಡಾಗ ಕೆಲವರಾದರೂ ನಮ್ಮನ್ನು ನೆನಪಿಸಿಕೊಳ್ಳಬಹುದು. ಅನ್ನ ನೀರಿಲ್ಲದೆ ಒಂದೆರಡು ದಿನ ಬದುಕಬಹುದು. ಪ್ರಾಣವಾಯುವಿಲ್ಲದೆ ಬದುಕಲು ಸಾಧ್ಯವಿಲ್ಲ. ಅದು ನಮಗೆ ಮರದಿಂದಲೇ ಸಿಗಬೇಕು. ಮರದಿಂದ ಮಲೆ, ಮಲೆಯಿಂದ ಮಳೆ. ಆದ್ದರಿಂದ ವನಮಹೋತ್ಸವ ಮನೆಯಿಂದಲೇ ಆರಂಭವಾಗಬೇಕು. ಹುಟ್ಟುಹಬ್ಬದಂದು ಒಂದು ಸಸಿ ನೆಟ್ಟು ಅದರಿಂದ ಸಂತೋಷ ಪಡೆಯೋಣ ಎಂದರು.
ಪ್ರತಿ ವರ್ಷ ಒಂದೊಂದು ಮನೆಯಲ್ಲಿ ಒಂದೊಂದು ಸಸಿ ನೆಟ್ಟರೆ ಮುಂದೊಂದು ದಿನ ದೇಶವೇ ಮರಗಳಿಂದ ಆವೃತವಾಗಬಹುದು. ಮರಗಳು ನಮಗೆ ನೆರಳು, ಹಣ್ಣು ನೀಡುವುದರೊಂದಿಗೆ ಆಮ್ಲಜನಕ ಒದಗಿಸುತ್ತದೆ. ಮರ ಪರೋಪಕಾರಿ, ಮರ ಸ್ವಾರ್ಥರಹಿತ ಎಂದು ಅಮ್ಮುಂಜೆ ಗ್ರಾಪಂ ಸದಸ್ಯ ಚಂದ್ರಶೇಖರ ಶೆಟ್ಟಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಮ್ಮುಂಜೆ `ವೀರಯೋಧ ಯಾದವ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಪ್ರಶಾಂತ ಕುಲಾಲ್, ಕಾರ್ಯದರ್ಶಿ ಉದಯ ಕುಮಾರ್, ಪೊಳಲಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಪೊಳಲಿ ಸೇವಾ ಸಹಕಾರಿ ಬ್ಯಾಂಕಿನ ನಿರ್ಧೇಶಕ ಕರುಣಾಕರ ಆಳ್ವ ಅಮ್ಮುಂಜೆ, ಶಾಲಾ ಮುಖ್ಯ ಶಿಕ್ಷಕಿ ಅಪೋಲಿನ್, ಗಂಗಾಧರ ಪೂಜಾರಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಶಾಲಾ ಶಿಕ್ಷಕ ಹರೀಶ ರಾವ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಹಾಬಲ ವಂದಿಸಿದರು.

