ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆಂತರಿಕ ಕಲಹ ತೀವ್ರಗೊಂಡಿದೆ. ಪ್ರತಿಭಟನಾಕಾರರು ಇಂದೂ ಕೂಡಾ ಪ್ರಧಾನಿ ನವಾಜ್ ಶರೀಫ್ ನಿವಾಸಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ . ಸೇನೆ ಕೂಡಾ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗಕ್ಕೆ ಮುಂದಾಗಿದ್ದುಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ದೇಶದ ಸರಕಾರಿ ಚಾನೆಲ್ ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿದ್ದು, ಯಾವಾಗಬೇಕಾದರೂ ಸೇನಾಡಳಿತ ಸ್ಥಾಪನೆಗೊಂಡು ಸರ್ವಾಧಿಕಾರ ನೆಲೆಗೊಳ್ಳುವ ಸಾಧ್ಯತೆ ನಿಚ್ಚಳಗೊಂಡಿದೆ.
ಪ್ರಧಾನಿ ನಿವಾಸಕ್ಕೆ ದೊಣ್ಣೆಗಳಿಂದ ಹೊರಟ ಪ್ರತಿಭಟನಾಕಾರರು ಸಿಕ್ಕಸಿಕ್ಕಲ್ಲಿ ಧ್ವಂಸಗೊಳಿಸಿದ್ದು, ಸೇನೆಯ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು ಸಿಡಿಸಿದ್ದಾರೆ. ಪ್ರಧಾನಿ ನವಾಜ್ ಶರೀಫ್ ತನ್ನ ನಿವಾಸದಿಂದ ತಪ್ಪಿಸಿಕೊಂಡಿದ್ದಾರೆ ಅಥವಾ ಅಲ್ಲಿರಲಿಲ್ಲ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಈಗಾಗಲೇ ಏಳು ಮಂದಿ ಮೃತರಾಗಿದ್ದು, 200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಹಾಗೂ ಧಾರ್ಮಿಕ ಮುಖಂಡ ತಾಹಿರ್ ಉಲ್ ಖಾದ್ರಿ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಶನಿವಾರದಿಂದ ಅದು ಅರಾಜಕತೆಯ ಹಂತಕ್ಕೆ ತಲುಪಿದೆ. ಪೊಲೀಸರ ಜತೆಗಿನ ಘರ್ಷಣೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.
ಆಗಾಗ್ಗೆ ಮಿಲಿಟರಿ ಆಡಳಿತದ ತೆಕ್ಕೆಗೆ ಜಾರುವ ಪಾಕಿಸ್ತಾನದಲ್ಲಿ, ಸದ್ಯದ ರಾಜಕೀಯ ಸ್ಥಿತಿ ಅಯೋಮಯವಾಗಿದೆ. ಆಡಳಿತದ ಚುಕ್ಕಾಣಿಯನ್ನು ಸೇನೆ ಮತ್ತೊಮ್ಮೆ ಕೈಗೆತ್ತಿಕೊಳ್ಳುವ ಲಕ್ಷಣಗಳು ಕಾಣಿಸತೊಡಗಿವೆ.
ಸೋಮವಾರ ಭಾರೀ ಮಳೆಯ ಮಧ್ಯೆಯೂ ಪ್ರತಿಭಟನೆಕಾರರು ಪಾಕಿಸ್ತಾನದ ಸೆಕ್ರೆಟೇರಿಯೇಟ್ ಪ್ರದೇಶದೊಳಕ್ಕೆ ಪ್ರವೇಶಿಸಿದ್ದು, ಇಲ್ಲಿ ಪ್ರಮುಖ ಸರಕಾರಿ ಇಲಾಖೆಗಳು ಮತ್ತು ಪ್ರಧಾನಿ ನಿವಾಸಗಳಿವೆ.
ಪ್ರತಿಭಟನೆಕಾರರು ತಮ್ಮ ಗುರಿಯತ್ತ ಸಮೀಪಿಸುತ್ತಿದ್ದಂತೆ ದ್ವಿಚಕ್ರ ವಾಹನ ಸವಾರರು ಮತ್ತು ಕಾರುಗಳ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತಿದೆ. ಶನಿವಾಋ ರಾತ್ರಿಯೇ ಪ್ರಧಾನಿ ಷರೀಫ್ ನಿವಾಸಕ್ಕೆ ಲಗ್ಗೆಹಾಕಲು ಪ್ರತಿಭಟನೆಕಾರರು ಹವಣಿಸಿದ್ದರು. ಆದರೆ ಪೊಲೀಸರು ಅವರನ್ನು ಹಿಮ್ಮೆಟ್ಟಿಸಿದ್ದರು.
ಘರ್ಷಣೆಗಳಲ್ಲಿ ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥರು ಹಾಗೂ ಇನ್ನೊಬ್ಬ ಹಿರಿಯ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷದ ಚುನಾವಣೆಯಲ್ಲಿ ಭಾರೀ ಬಹುತದೊಂದಿಗೆ ಅಧಿಕಾರಕ್ಕೇರಿದ್ದ ಪ್ರಧಾನಿ ನವಾಜ್ ಷರೀಫ್, ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಈ ಬಿಕ್ಕಟ್ಟಿನಿಂದ ಅವರು ಪಾರಾದರೂ ಇನ್ನುಳಿದ ಅಧಿಕಾರಾವಧಿಯಲ್ಲಿ ಅವರ ಅಧಿಕಾರಕ್ಕೆ ಕತ್ತರಿ ಬೀಳುವುದು ನಿಶ್ಚಿತವಾಗಿದೆ. ಸಂಸತ್ತು ತಮ್ಮ ಹಿಡಿತದಲ್ಲೇ ಇದೆ ಎಂದು ತೋರ್ಪಡಿಸಲು ಮಂಗಳವಾರ ಉಭಯ ಸದನಗಳನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಈ ನಡುವೆ ಪ್ರತಿಭಟನೆಕಾರರು ಮತ್ತು ಪೊಲೀಸರಿಗೆ ಸೇನೆ ಎಚ್ಚರಿಕೆ ನೀಡಿದ್ದು, ಶಾಂತಿ ಕಾಪಾಡುವಂತೆ ಸೂಚಿಸಿದೆ. ಪರಿಸ್ಥಿತಿ ಕೈಮೀರುವಂತಾದರೆ ತಾನು ಸುಮ್ಮನಿರಲು ಸಾದ್ಯವಿಲ್ಲ ಎಂದು ಸೇನೆ ಹೇಳಿದೆ. ಆದರೂ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಲು ಸಾಧ್ಯವಿದೆ ಎಂದು ಅದು ಹೇಳಿಕೊಂಡಿದೆ.
ಸೇನಾಡಳಿತ ಹೇರಿಕೆ ಸಾಧ್ಯತೆ:
ದೇಶದಲ್ಲಿ ಇದೇ ರೀತಿ ಅರಾಜಕತೆ ಮುಂದುವರಿದಿದ್ದೇ ಆದರೆ ಸೇನಾಡಳಿತ ಹೇರುವ ಸಾಧ್ಯತೆ ಇದ್ದು, ಆಂತರಿಕ ಭಿಕಟ್ಡು ತೀವ್ರಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.



