ಎಡಪದವು: ಎಡಪದವು ಗ್ರಾಮ ಪಂಚಾಯತ್‍ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗುರುವಾರ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಗುರುವಾರ ನಡೆಯಿತು. ಈ ಗ್ರಾಮ ಸಭೆಯು ವಿದ್ಯುತ್ ಸಮಸ್ಯೆ, ಸಾಂಕ್ರಾಮಿಕ ರೋಗಗಳು, ಹಾಗೂ ರಸ್ತೆ ದುರವಸ್ಥೆ ಈ ವಿಚಾರಗಳು ಪ್ರಮುಖವಾಗಿ ಗಮನಸೆಳೆದವು.

2806malali19
ಆರೋಗ್ಯಾಧಿಕಾರಿ ಡಾ. ಚಿರಾಗ್ ಮಾತನಾಡಿ, ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಡೆಂಗ್ಯೂ ಜ್ವರವು ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದ್ದು, ಮನೆಯೊಳಗಡೆ ಹಾಗೂ ಹೊರಗಡೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಇಲಿಜ್ವರ ಇಲಿ ಕಚ್ಚುವುದರಿಂದ ಬರುವುದಿಲ್ಲ. ಬದಲಿಗೆ ಅದರ ಮೂತ್ರದಿಂದ ಬರುತ್ತದೆ. ಇಲಿ ಜ್ವರದಲ್ಲಿ ಸೌಮ್ಯಮಟ್ಟದ ಜ್ವರ ಕಾಣಿಸಿಕೊಂಡು ಉಲ್ಬಣಾವಸ್ಥೆ ತಲುಪಿ ಕೊನೆಗೆ ಮೂತ್ರಪಿಂಡಗಳಿಗೆ ತಲುಪಿ ಅದು ವಿಫಲಗೊಂಡು ಪ್ರಾಣಾಂತಿಕವಾಗುತ್ತದೆ. ಆದ್ದರಿಂದ ಯಾವುದೇ ಜ್ವರವನ್ನೂ ನಿರ್ಲಕ್ಷಿಸಬಾರದು, ಬಾವಿ-ನಳ್ಳಿನೀರಿನ ತಪಾಸಣೆ ಮಾಡುವಂತೆ ಸೂಚಿಸಿದರು. ತೆಂಕ ಎಡಪದವು ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಗಳ ಸಮಸ್ಯೆ ಇರುವ ಬಗ್ಗೆ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಅವರು ಸರಕಾರ ನೇಮಕಾತಿ ನಡೆಸಲಿದೆ ಎಂದು ಉತ್ತರಿಸಿದರು.2806malali18 (1)

ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಮಸ್ಯೆಯ ಬಗ್ಗೆ ಮಾತಾಡಿದಾಗ ಸಾರ್ವಜನಿಕರು ಇಲಾಖೆಯ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕಂಚಿದಬೆಟ್ಟು ಎಂಬಲ್ಲಿ ವಿದ್ಯುತ್ ಶಾಖ್ ಹೊಡೆಯುತ್ತಿದೆ. ಎಡಪದವು ಆಂಗ್ಲ ಮಾಧ್ಯಮ ಶಾಲೆಯ ಬಳಿ ತಂತಿ ನೇತಾಡುತ್ತಿದೆ, ವಿದ್ಯುತ್ ಸಮಸ್ಯೆ ಕಾಡುತ್ತಿದೆ. ತಂತಿಗೆ ತಗಲುವ ಮರಗಳನ್ನು ಕಡಿದ ಮೇಲೆ ಮರಗಳನ್ನು ಅಲ್ಲೇ ಬಿಟ್ಟುಹೋಗುತ್ತಾರೆ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಜಿ.ಪಂ. ಇಂಜಿನಿಯರ್ ವಿಶ್ವನಾಥ್ ಮಾತಾಡಿದಾಗ ಸಾರ್ವಜನಿಕರು ಆರೋಪಗಳ ಮಳೆಯನ್ನೇ ಸುರಿಸಿದರು. ಪಾಡ್ಯಾರ್ ಬಳಿ ರಸ್ತೆ ನಿರ್ಮಿಸಿದರೂ ಅದರ ಬದಿಗೆ ಮಣ್ಣು ಹಾಕಲಿಲ್ಲ. ಕಳೆದ ಆರು ತಿಂಗಳಿನಿಂದ ದೂರಿತ್ತರೂ ಪ್ರಯೋಜನವಿಲ್ಲ. ಇದನ್ನು ಸರಿಪಡಿಸದೇ ಇದ್ದರೆ ಮುಂದಿನ ಸಭೆಯಲ್ಲಿ ನಿಮ್ಮನ್ನು ವೇದಿಕೆ ಹತ್ತಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಇದಕ್ಕೆ ಉತ್ತರಿಸಿದ ಇಂಜಿನಿಯರ್ ಇದಕ್ಕೆ ಪಾವತಿಆಗದ ಕಾರಣ ಮಣ್ಣು ಹಾಕಲು ವಿಳಂಬವಾಗಿದೆ. ಇದನ್ನು ಸರಿಪಡಿಸುತ್ತೇನೆ ಎಂದು ನುಡಿದರು. ಎಡಪದವು ಕಾಲೇಜ್ ಬಳಿ ಚರಂಡಿಯ ಮಧ್ಯೆ ಶುದ್ಧನೀರಿನ ಘಟಕ ಸ್ಥಾಪಿಸಿದ್ದು ಯಾಕೆ? ಮೋರಿ ಅಳವಡಿಸಿಲ್ಲ ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಕಾಲೇಜ್ ಬಳಿ ಇರುವ ಹಂಪ್ಸ್ ಬಳಿಯ ತೋಡಿಗೆ ಮೋರಿ ಯಾಕೆ ಹಾಕಿಲ್ಲ? ಇದರಿಂದ ಕಾಂಕ್ರೀಟ್ ರಸ್ತೆ ಜಾರುತ್ತದೆ. ಇದರ ಬಗ್ಗೆ ಇಂಜಿನಿಯರ್ ಯಾಕೆ ಕ್ರಮಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಆಗ ಮಧ್ಯೆ ಪ್ರವೇಶಿಸಿ ಉತ್ತರಿಸಿದ ಸದಸ್ಯ ಸುಕುಮಾರ್ ಈ ಬಗ್ಗೆ ಕ್ರಮ ಕೈಗೊಳ್ಳಲು ಹೋದಾಗ ಖಾಸಗಿಯವರು ತನ್ನ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾದರೆ ಅಭಿವೃದ್ಧಿ ಕ್ರಮ ಹೇಗೆ ಎಂದು ಪ್ರಶ್ನಿಸಿದರು. ಆಗ ಗ್ರಾಮಸ್ಥರು ಸದಸ್ಯರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿ ಇಂಜಿನಿಯರ್ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಮಕ್ಕಳು ಹಾಗೂ ಮಹಿಳಾ ಇಲಾಖೆಯ ಮಾಲಿನಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಮಹೇಶ್ ಮಾತನಾಡಿದರು. ಪಿಡಿಓ ಭೋಗಮಲ್ಲಣ್ಣ ಗ್ರಾಮ ಸಭೆ ನಡೆಸಿ ವರದಿ ಮಂಡಿಸಿದರು. ಸಹಾಯಕ ಕೃಷಿ ನಿರ್ದೇಶಕರು ಕುಲಕರ್ಣಿ ನೋಡಲ್ ಅಧಿಕಾರಿಯಾಗಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಂ ಉಪಾಧ್ಯಕ್ಷ ಗೋಪಾಲ, ತಾ.ಪಂ. ಸದಸ್ಯ ನಾಗೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ಎಡಪದವು ಗ್ರಾಮ ಪಂಚಾಯತ್‍ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗುರುವಾರ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಗುರುವಾರ ನಡೆಯಿತು.

By suddi9

Leave a Reply

Your email address will not be published. Required fields are marked *