ಕೈಕಂಬ: ಗಂಜಿಮಠ-ಕುಪ್ಪೆಪದವು-ಬಿ ಸಿ ರೋಡ್ ಸಂಪರ್ಕ ಕಲ್ಪಿಸುವ ಮೂಲರಪಟ್ಣ ಸೇತುವೆ ಕುಸಿದ ಬಳಿಕ ಈ ಭಾಗದ ಜನರ ಮಂಗಳೂರು ಅಥವಾ ಬಿ ಸಿ ರೋಡ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಾಲಾ ಮಕ್ಕಳು, ಕಾರ್ಮಿಕರು ಮಂಗಳವಾರ ರಜೆ ಹಾಕಿದ್ದರು. ಸ್ಥಳದಲ್ಲಿ ಪರಿಹಾರ ಸಮರೋಪಾದಿಯಲ್ಲಿ ನಡೆಯುತ್ತಿದೆ. ತಾತ್ಕಾಲಿಕ ರಸ್ತೆ ನಿರ್ಮಾಣವಾಗುತ್ತಿದೆ. ಸೇತುವೆಯ ಎರಡೂ ಕಡೆ ಸಾಕಷ್ಟು ಸಂಖ್ಯೆಯ ಕುತೂಹಲಿಗರು ಜಮಾಯಿಸಿದ್ದಾರೆ. ಸೇತುವೆ ಕುಸಿದು ಬಿದ್ದ ಬಗ್ಗೆ ಒಬ್ಬೊಬ್ಬರು ಒಂದೊಂದು ಕಾರಣ ನೀಡುತ್ತಿದ್ದಾರೆ. ಆದರೆ ಮರಳು ಮಾಫಿಯಾ ಮತ್ತು ಎಂಆರ್ಪಿಎಲ್ ಕೊಳವೆ ಅಳವಡಿಕೆಯಿಂದ ಈ ಸೇತುವೆ ಇಷ್ಟು ಬೇಗ ಕುಸಿದು ಬಿತ್ತೆಂದು ಬಹುತೇಕ ಮಂದಿ ಹೇಳುತ್ತಾರೆ. ನಿನ್ನೆ ಕುಸಿದು ನೇತಾಡುತ್ತಿದ್ದ ಸೇತುವೆಯ ಒಂದು ಭಾಗ ಮಂಗಳವಾರ ಬಿದ್ದಿದೆ. ಸೇತುವೆ ನಿರ್ಮಾಣ ಒಂದರೆಡು ವರ್ಷ ತಗುಲಬಹುದು. ಅಲ್ಲಿವರೆಗೆ ಪರ್ಯಾಯ ವ್ಯವಸ್ಥೆಯೇ ಮುಂದುವರಿಯಲಿದೆ.
“ಎರಡೂ ಕಡೆಯ ಶಾಲಾ ಮಕ್ಕಳ ಸಹಿತ ಉಳಿದ ನಾಗರಿಕರಿಗೆ ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಅತ್ತ ತೂಗುಸೇತುವೆ ಉಪಯೋಗಕ್ಕೂ ಆದ್ಯತೆ ನೀಡಲಾಗುವುದು. ಸಾಧ್ಯವಿರುವ ಎಲ್ಲ ಕಡೆ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ಮೂಲರಪಟ್ಣವಾಗಿ ಬಿ ಸಿ ರೋಡಿಗೆ ಎರಡು ಪ್ರತ್ಯೇಕ ಸರ್ಕಾರಿ ಬಸ್ ಹಾಗೂ ಕೋಲ್ತಮಜಲ್-ಕೈಕಂಬದ ಸರ್ಕಾರಿ ಬಸ್ಸನ್ನು ಮೂಲರಪಟ್ಣವಾಗಿ ಬಿ ಸಿ ರೋಡಿಗೆ ವ್ಯವಸ್ಥೆ ಮಾಡಲಾಗುವುದು” ಎಂದು ಮಂಗಳವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡೀಸಿ ಸಸಿಕಾಂತ್ ಸೆಂಥಿಲ್ ಭರವಸೆ ನೀಡಿದರು. ಇವರೊಂದಿಗೆ ಪಿಡಬ್ಲ್ಯೂಡಿ ಇಂಜಿನಿಯರುಗಳು ಹಾಗೂ ಇತರ ಅಧಿಕಾರಿಗಳು ಇದ್ದರು.
ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದನೀಯ ಕೆಲಸ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದೆಂದು ಸ್ಥಳಕ್ಕಾಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ , ಹಾಗೂ ಶಾಸಕ ರಾಜೇಶ್ ನಾಯಕ್ ಹೇಳಿದರು.
ಅಧಿಕಾರಿಗಳ ನಿರ್ಲಕ್ಷ್ಯ :
ಸೇತುವೆ ಕುಸಿಯಲು ಮರಳು ಮಾಫಿಯಾ ಅಲ್ಲಗಳೆಯುವಂತಿಲ್ಲ. ಸೇತುವೆ ಪಕ್ಕದಲ್ಲೇ ಮರಳುಗಾರಿಕೆ ನಡೆಯುತ್ತಿತ್ತು. ಪಿಡಬ್ಲ್ಯೂಡಿ ಸಹಿತ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯದಿಂದ ಸೇತುವೆ ಕುಸಿದು ಈ ಭಾಗದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ನಿಯಮಿತವಾಗಿ ಜಿಲ್ಲೆಯ 25 ಸೇತುವೆಗಳ ಗುಣಮಟ್ಟ ಪರಿಶೀಲನೆ ಮಾಡದ ಅಧಿಕಾರಿಗಳ ನಿರ್ಲಕ್ಷ್ಯ ಅಕ್ಷಮ್ಯ. ಇದೇ ರೀತಿ ಇನ್ನೂ ಕೆಲವು ಸೇತುವೆಗಳು ಕುಸಿಯುವ ಹಂತ ತಲುಪಿದ್ದು, ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಎಂದು ಸ್ಥಳೀಯ ಬಂಟ್ವಾಳ ಜಿಪಂ ಸದಸ್ಯ ತುಂಗಪ್ಪ ಬಂಗೇರ ಹೇಳಿದರು.
ಸ್ಥಳೀಯರು ಹೇಳಿದ್ದೇನು ?
ಸೇತುವೆಯ ಒಂದೆರಡು ಕಂಬಗಳ ಕೆಲಸ ಅತಿ ಕ್ಷಿಪ್ರಗತಿಯಲ್ಲಿ ನಡೆದಿತ್ತು. ಕಾಮಗಾರಿ ಕಳಪೆಯಾಗಿದ್ದು, ಸೇತುವೆ ಅಪಾಯದಲ್ಲಿದೆ ಎಂದು ನಾವು ಕೆಲವು ದಿನಗಳ ಹಿಂದೆ ವಾಟ್ಸಾಪ್ ಮತ್ತು ಫೇಸ್ಬುಕ್ಕಲ್ಲಿ ಪ್ರಸಾರ ಮಾಡಿದ್ದೆವು. ಆದರೆ ಯಾರೂ ಇತ್ತ ಗಮನ ಹರಿಸಿಲ್ಲ. ಮರಳು ಮಾಫಿಯಾ ಸೇತುವೆ ಕುಸಿತಕ್ಕೆ ಕಾರಣ ಎಂದು ನಮಗೆ ಅನ್ನಿಸುತ್ತಿಲ್ಲ ಎಂದು ಮೂಲರಪಟ್ಣ ನಿವಾಸಿಗಳಾದ ಮೊಹಮ್ಮದ್ ಮುಸ್ತಾಫ ಮತ್ತು ಮೊಹಮ್ಮದ್ಶಾಕಿರ್ ಹೇಳಿದರು.
“ಇಂದು ಇಲ್ಲಿ ಎಲ್ಲರೂ ಏಕಮತದಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಸೇತುವೆ ಕೆಳಗೆ ಅಕ್ರಮ ಮರಳುಗಾರಿಕೆ ನಡೆಸಿದ್ದರಿಂದ ಈ ಸೇತುವೆ ಕುಸಿದು ಬಿತ್ತೆಂದು ಹೇಳಲು ಯಾರೂ ಮುಂದೆ ಬರುತ್ತಿಲ್ಲ. ಬದಲಾಗಿ ಕಳಪೆ ಕಾಮಗಾರಿಯಿಂದ ಸೇತುವೆ ಕುಸಿದಿದೆ ಎನ್ನುತ್ತಾರೆ. ಸೇತುವೆ ಕೆಳಗಡೆ ಭಾರೀ ಗಾತ್ರದ ನೀರಿನ ಕೊಳವೆ ಅಳವಡಿಸಲಾಗಿದ್ದು, ಇದಕ್ಕಾಗಿ ಕಂಪ್ರೆಸ್ಸರ್ ಬಳಸಿ ಬಂಡೆ ಒಡೆಯಲಾಗಿತ್ತು. ಇದರಿಂದ ಸೇತುವೆ ಕಂಬಗಳಿಗೆ ಹಾನಿಯಾಗಿರಲೂ ಬಹುದು. ಈ ಬಗ್ಗೆ ತನಿಖೆ ನಡೆದರೆ ಎಲ್ಲರ ಬಣ್ಣ ಬಯಲಾಗಲಿದೆ. ಈಗ ಇಲ್ಲಿಂದ ಗರ್ಭಿಣಿಯರು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕೊಂಡೊಯ್ಯುವುದು ಕಷ್ಟ. ಕೆಲಸಗಾರರು, ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಇಲ್ಲಿ ಪರ್ಯಾಯ ವ್ಯವಸ್ಥೆ ಹೇಳಿದಷ್ಟು ಸುಲಭವಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಬಡಗಬೆಳ್ಳೂರು ಶಶಿಕಿರಣ್ ಹೇಳಿದರು.
ಉದ್ಘಾಟನೆಯಾಗದ ಸೇತುವೆ :
ಗುಂಡೂರಾವ್ ಸೀಎಂ ಆಗಿದ್ದಾಗ ಮೂಲರಪಟ್ಣ ಸೇತುವೆ ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿತ್ತು. ಆಗ ಗಂಗಾಧರ ಗೌಡ ಪಿಡಬ್ಲ್ಯೂಡಿ ಸಚಿವರಾಗಿದ್ದರು. ಆದರೆ ಉದ್ಘಾಟನೆಯಂದು ಸಚಿವರು ಆಗಮಿಸದ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು. ಬಳಿಕ ಇದುವರೆಗೂ ಸೇತುವೆ ಉದ್ಘಾಟನೆಗೊಂಡಿಲ್ಲ, ಬದಲಾಗಿ ನೀರುಪಾಲಾಗಿದೆ.
ಸೇತುವೆ ಕುಸಿದಿರುವುದರಿಂದ ಮೂಲರಪಟ್ಣ ಮತ್ತು ಕುಳವೂರು ಭಾಗದಿಂದ ಕೈಕಂಬ, ಮಂಗಳೂರು, ಸುರತ್ಕಲ್, ಎಂಆರ್ಪಿಎಲ್ಗೆ ಕೆಲಸಕ್ಕೆ ಹೋಗುವ ಕಾರ್ಮಿಕರು ಮತ್ತು ದೂರದ ಶಾಲೆಗಳಿಗೆ ಹೋಗುವ ಈಗ ರಜೆ ಮಾಡಬೇಕಾದ ಪ್ರಮೇಯ ಒದಗಿ ಬಂದಿದೆ. ತಾತ್ಕಾಲಿಕ ಸಂಚಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಜಿ ತಾಪಂ ಸದಸ್ಯ ದೇವಪ್ಪ ಪೂಜಾರಿ ತಿಳಿಸಿದರು.
ತೂಗುಸೇತುವೆ:
ಕಳೆದ ವರ್ಷ ಕುಳವೂರು ಶಾಲೆಯ ಹಿಂಭಾಗದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆಯೊಂದೇ ಈಗ ಎರಡೂ ಕಡೆಯ ಮಂದಿಗೆ ಪ್ರಯಾಣಕ್ಕೆ ಆಸರೆಯಾಗಿದೆ. ತೂಗುಸೇತುವೆಯಾಗಿ ಮೂಲರಪಟ್ಣಕ್ಕೆ ನಡೆದುಕೊಂಡು ಹೋಗುವ ದಾರಿಮಧ್ಯೆ ನದಿ ಬದಿಯಲ್ಲಿ ನಿರ್ಮಿಸಲಾಗಿದ್ದ ಮೋರಿಯೊಂದು ಕುಸಿದಿದ್ದು, ಭಾರೀ ಹೊಂಡ ಸೃಷ್ಟಿಯಾಗಿದೆ. ಸದ್ಯ ಇಲ್ಲಿ ಹೊಸ ಕೊಳವೆಯೊಂದಿಗೆ ದುರಸ್ತಿ ಕಾಮಗಾರಿ ನಡೆಯುತ್ತಿದೆ.
ಗಂಜಿಮಠವಾಗಿ ಮೂಲರಪಟ್ಣಕ್ಕೆ ತೆರಳುವ ಹಾಗೂ ಕುಪ್ಪೆಪದವಿಂದ ಬಿ ಸಿ ರೋಡಿಗೆ ತೆರಳುವ ಬಸ್ಸುಗಳು ಈಗ ಕುಳವೂರಿನವರೆಗೆ ಸೀಮಿತವಾಗಿದೆ. ಡೀಸಿ ಆದೇಶದಂತೆ ಕುಳವೂರು ಪದವಿಪೂರ್ವ ಕಾಲೇಜಿನ ಪಕ್ಕದಲ್ಲಿರುವ ರಸ್ತೆಯ ಮೂಲಕ ತೂಗುಸೇತುವೆಗೆ ನೇರ ಸಂಪರ್ಕ ಕಲ್ಪಿಸಲು ಹಾಗೂ ಗುಡ್ಡದ ಬದಿಯಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಲು ಜೆಸಿಬಿ ಕಾರ್ಯಾಚರಣೆ ನಡೆಸುತ್ತಿದೆ.
* ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.


