ಕೋಲಾರ: ಕೆ.ಸಿ.ವ್ಯಾಲಿ ನೀರನ್ನು ಮೂರು ಬಾರಿ ಶುದ್ಧೀಕರಿಸುವುದು ಹಾಗೂ ನೀರಿನ ಗುಣಮಟ್ಟವನ್ನು ಖಾತ್ರಿಪಡಿಸುವಂತೆ ನೀರಾವರಿ ಹೋರಾಟ ಸಮಿತಿಯ ಸಂಚಾಲಕರು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜುರವರಿಗೆ ಮನವಿ ಸಲ್ಲಿಸಿದರು.
ಸಚಿವರು ಕೆ.ಸಿ.ವ್ಯಾಲಿನ ನೀರಿನ ವೀಕ್ಷಣೆಗೆ ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ನೀರಾವರಿ ಸಂಚಾಲಕರು ಮನವಿ ಪತ್ರವನ್ನು ಸಲ್ಲಿಸಿದರು.
ಕೋರಮಂಗಲ ಚಲ್ಲಘಟ್ಟ ನೀರನ್ನು ಎರಡು ಬಾರಿ ಶುದ್ಧೀಕರಿಸಿ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಸುತ್ತಿರುವುದು ಸಂತೋಷ. ಆದರೆ, ಕೆ.ಸಿ.ವ್ಯಾಲಿ ನೀರನ್ನು ಮೂರು ಬಾರಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸಬೇಕೆಂದು ಒಂದು ವರ್ಷಗಳಿಂದ ನಿರಂತರವಾಗಿ ಒತ್ತಾಯ ಮಾಡುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನರ ಗಮನಕ್ಕೂ ತರಲಾಗಿತ್ತು. ಅಂದಿನ ಮುಖ್ಯಮಂತ್ರಿಗಳು ಮೂರು ಬಾರಿ ಶುದ್ಧೀಕರಿಸಿ ಹರಿಸುವುದಾಗಿ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ಭರವಸೆಯನ್ನು ನೀಡಿದ್ದರು.
ಆದರೆ, ಮೂರನೇ ಬಾರಿ ಶುದ್ದೀಕರಿಸದೆ ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ನೀರನ್ನು ಹರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಜನರಿಗೂ ನೀರಿನಲ್ಲಿ ಅನೇಕ ಲವಣಾಂಶಗಳಿವೆಯೆಂಬ ಆತಂಕ ಕಾಡುತ್ತಿದ್ದು, ನೀರನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಿ ಗೊಂದಲ ನಿವಾರಣೆ ಮಾಡಬೇಕೆಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅಂತರ್ಜಲ ತೀವ್ರ ಪ್ರಪಾತಕ್ಕೆ ಕುಸಿದಿದ್ದು, ಅದೇ ನೀರನ್ನು ಕೊಳವೆ ಬಾವಿಗಳ ಮುಖಾಂತರ ಸೇವಿಸಿ, ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕೆ.ಸಿ.ವ್ಯಾಲಿ ನೀರಿನ ಬಗ್ಗೆ ಸ್ಪಷ್ಟತೆ ಇಲ್ಲವೆಂದು ಜನರು ಆತಂಕಗೊಂಡಿದ್ದಾರೆ. ಹಾಗಾಗಿ ಸಚಿವರು ಜಿಲ್ಲೆಯ ಜನರಿಗೆ ಸ್ಪಷ್ಠವಾದ ಭರವಸೆ ನೀಡಿ ಕೆ.ಸಿ.ವ್ಯಾಲಿ ನೀರನ್ನು ಮೂರು ಬಾರಿ ಶುದ್ಧೀಕರಿಸುವುದು ಹಾಗೂ ನೀರಿನ ಶುದ್ಧತೆಯ ಬಗ್ಗೆ ಖಾತ್ರಿಪಡಿಸಬೇಕು. ಇಲ್ಲವಾದಲ್ಲಿ ಸಂವಿಧಾನದ ಬದ್ದ ಕಲಂ 21ರ ಅಡಿಯಲ್ಲಿ ಶುದ್ಧ ಮತ್ತು ಸುರಕ್ಷಿತ ನೀರಿನ ಹಕ್ಕಿನ ಬಗ್ಗೆ ಹೋರಾಟಗಳನ್ನು ಮುಂದುವರೆಸುತ್ತೇವೆಂದು ತಿಳಿಸಲು ಇಚ್ಚಿಸುತ್ತೇವೆ ಹೋರಾಟಗಾರರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೀರಾವರಿ ಹೋರಾಟಗಾರ ವಿ.ಕೆ.ರಾಜೇಶ್, ಎಪಿಎಂಸಿ ಪುಟ್ಟರಾಜು, ಗಲ್‍ಪೇಟೆ ಸಂತೋಷ್, ಕೋಟೆ ರಾಜೇಶ್, ಸುಬ್ರಮಣಿ, ನಗರಸಭಾ ಮಾಜಿ ಸದಸ್ಯ ತ್ಯಾಗರಾಜ್ ಮತ್ತಿರರಿದ್ದರು.

