ಬಂಟ್ವಾಳ: ತಾಲೂಕಿನ ಲೊರೆಟ್ಟೊಪದವು ಸಮೀಪದ ಟಿಪ್ಪುನಗರ ಎಂಬಲ್ಲಿ ಕಳೆದ ಹಲವು ಸಮಯದಿಂದ ನಡೆಯುತ್ತಿತ್ತು ಎನ್ನಲಾದ ಅಕ್ರಮ ಕಸಾಯಿಖಾನೆಗೆ ನಗರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ಪೊಲೀಸರು ದಿಢೀರ್ ದಾಳಿ ನಡೆಸಿ ಒಂದೂವರೆ ಕ್ವಿಂಟಾಲ್ ದನದ ಮಾಂಸ ಸಹಿತ ಐದು ಜಾನುವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಆರೋಪಿ ಬಶೀರ್ ಮತ್ತಿತರ ತಂಡ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಜಮೀನು ಸ್ಥಳೀಯ ನಿವಾಸಿ ಮ್ಯಾಂಕ್ಸಿಂ ಎಂಬವರಿಗೆ ಸೇರಿದ್ದು, ವಿವಿಧೆಡೆಯಿಂದ ಕಳವು ಮಾಡಿ ತಂದ ಜಾನುವಾರುಗಳನ್ನು ಇಲ್ಲಿ ಮಾಂಸ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕೃತ್ಯಕ್ಕೆ ಬಳಸಿದ ಒಂದು ಪಿಕಪ್ ವಾಹನ ಮತ್ತು ಮಾಂಸ ಕತ್ತರಿಸುವ ವಿವಿಧ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಎಸ್ಸೈ ಹರೀಶ್, ಎಎಸ್ಸೈ ಸಂಜೀವ, ಸಿಬಂದಿಗಳಾದ ಕೃಷ್ಣ ಕುಲಾಲ್, ಸುರೇಶ್ ಪಡಾರ್, ರಾಘವೇಂದ್ರ, ಝಮೀರ್, ನಿರಂಜನ್ ಮತ್ತಿತರು ಭಾಗವಹಿಸಿದ್ದರು.

