ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ಬಾರಿ ಸ್ಪರ್ಧಿಸಿ ಆರು ಬಾರಿ ಗೆಲುವು ಸಾಧಿಸಿಸುವ ಮೂಲಕ ಶಾಸಕನಾಗಿ, ವಿವಿಧ ಖಾತೆಯ ಮಂತ್ರಿಯಾಗಿ ಇಲ್ಲಿನ ಜನತೆಗೆ ಅನೇಕ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾಗಿದ್ದೇನೆ ಆದರೆ ಈ ಬಾರಿ ಚುನಾವಣೆಯಲ್ಲಿ ಕೇವಲ ಅಪಪ್ರಚಾರವನ್ನೇ ಸತ್ಯವೆಂದು ನಂಬಿದ ಮತದಾರರು ನನಗೆ ಕೃತಜ್ಞತೆ ಸಲ್ಲಿಸಲಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಖೇದ ವ್ಯಕ್ತಪಡಿಸಿದ್ದಾರೆ
ರಾಜೇಶ ನಾಯ್ಕ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಬಳಿಕ ಪತ್ರಿಕೆಯೊಂದರ ಪ್ರತಿನಿಧಿಯೊಂದಿಗೆ ಅವರು ಮಾತನಾಡಿದರು.
ಸುಮಾರು 20 ಸಾವಿರ ಮಂದಿಗೆ ಮನೆ ನಿವೇಶನ ಸಹಿತ ವಿವಿಧ ಹಕ್ಕುಪತ್ರ ನೀಡಿದ್ದೇನೆ. ಈ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಬಗ್ಗೆಯೂ ನನಗೆ ಅಪಾರ ಗೌರವ ಮತ್ತು ಕೃತಜ್ಞತಾ ಮನೋಭಾವ ಇದೆ. ರಾಜಕೀಯದಲ್ಲಿ ‘ಪಲಾಯನ’ವಾದ ಎಂಬುದು ನನ್ನ ಜಾಯಮಾನದಲ್ಲೇ ಇಲ್ಲ ಎಂದು ಹೇಳಿದ ಅವರು, ಮುಂದೆ ಏನಿದ್ದರೂ ಇಲ್ಲಿನ ಸ್ಥಳೀಯಾಡಳಿತ ಮತ್ತು ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಪ್ರತಿದಿನ ಜನಸಾಮಾನ್ಯರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಬೆರೆಯುತ್ತಿರುವ ನಾನು ‘ಗೆದ್ದಾಗ ಉಬ್ಬಿಕೊಳ್ಳದೆ, ಸೋತಾಗ ಕುಗ್ಗದೆ ‘ ಆರೋಗ್ಯವನ್ನೂ ಲೆಕ್ಕಿಸದೆ ಮತ್ತೆ ಮತ್ತೆ ಜನ ಸೇವೆ ಮಾಡುವ ತುಡಿತ ನನ್ನಲ್ಲಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯವಸ್ಥಿತ ಅಪಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಮಣಿಸಲು ಬಿಜೆಪಿ ಮತದಾರರನ್ನು ವಂಚಿಸುವ ಮೂಲಕ ತಾತ್ಕಾಲಿಕ ಗೆಲುವು ಸಾಧಿಸಿದೆ. ‘ಅಪಪ್ರಚಾರ ಎಂಬುದು ಜ್ವಾಲಾಮುಖಿಯಂತೆ ಸಮಾಜದಲ್ಲಿ ಬೇಗನೆ ಹರಡುತ್ತದೆ.’ ಆದರೆ ಸತ್ಯ ನಿಧಾನಗತಿಯಲ್ಲಿ ಜನತೆಗೆ ತಿಳಿಯಲಿದೆ ಎಂದು ಹೇಳಿದರು.
ಕೇವಲ ರಸ್ತೆ ನಿರ್ಮಾಣ ಮಾತ್ರ ಅಭಿವೃದ್ಧಿ ಅಲ್ಲ ಎನ್ನುತ್ತಿರುವ ಇಲ್ಲಿನ ನೂತನ ಶಾಸಕರು ಮುಂದಿನ ಐದು ವರ್ಷಗಳ ಅವಧಿಯಲ್ಲಿ ‘ಅಭಿವೃದ್ಧಿ’ಗೆ ಯಾವ ರೀತಿ ವ್ಯಾಖ್ಯಾನ ಬರೆಯುತ್ತಾರೆ ಎಂಬ ಕುತೂಹಲ ನನಗೂ ಉಂಟಾಗಿದೆ ಎಂದು ವ್ಯಂಗ್ಯ ಮಾಡಿದರು.
ಕಾಮಗಾರಿ ಮುಂದುವರಿಕೆ: ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ರೂ 1000 ಕೋಟಿಗೂ ಮಿಕ್ಕಿಗೂ ಮಿಕ್ಕಿ ಮೊತ್ತದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಉಳಿದಂತೆ ಪ್ರಗತಿಯಲ್ಲಿರುವ ಬಹುತೇಕ ಎಲ್ಲಾ ಕಾಮಗಾರಿಗಳಿಗೂ ಸಕರ್ಕಾರದಿಂದ ಮಂಜೂರಾತಿ ಸಹಿತ ಅನುದಾನ ಬಿಡುಗಡೆಗೊಂಡಿದೆ. ಇದೀಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ನಿರಾತಂಕವಾಗಿ ಮುಂದುವರಿಯಲಿದ್ದು, ಹೊಸ ಶಾಸಕರಿಗೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಬಾಕಿ ಉಳಿದಿಲ್ಲ ಎಂದರು.
ಕಾಂಗ್ರೆಸ್ ಅಹಿಂದ ಪರ: ದೇಶದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಭೂ ಮಸೂದೆ ಮತ್ತು ಮೀಸಲಾತಿಯಿಂದ ಗರಿಷ್ಠ ಲಾಭ ಗಿಟ್ಟಿಸಿಕೊಂಡ ಹಿಂದುಳಿದ ವರ್ಗ ಸೇರಿದಂತೆ ಪರಿಶಿಷ್ಟ ಜಾತಿ ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ಸಮಾನ ರಾಜಕೀಯ ಸ್ಥಾನಮಾನ ಸಿಕ್ಕಿದೆ. ಆದರೆ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಮಾತ್ರ ಬಲಿಷ್ಠ ಬಂಟ ಸಮುದಾಯದ ಐವರು ಅಭ್ಯಥರ್ಥಿಗಳಿಗೆ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಬಿಜೆಪಿಯು ಮೇಲ್ವರ್ಗ ಮತ್ತು ಬಂಡವಾಳಶಾಹಿಗಳ ಪಕ್ಷ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಅವರು ಟೀಕಿಸಿದರು.
ಮೋದಿ ವಚನ ಭ್ರಷ್ಟ :ದೇಶದಲ್ಲಿ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಪಿ.ವಿ.ನರಸಿಂಹ ರಾವ್, ಡಾ.ಮನಮೋಹನ್ ಸಿಂಗ್ ಅವರು ಒಂದಿಲ್ಲೊಂದು ರೀತಿಯಲ್ಲಿ ದುಡಿದು ಪ್ರಧಾನಿ ಹುದ್ದೆಗೆ ಗೌರವ ತುಂಬಿದ್ದಾರೆ. ಆದರೆ ಕೇವಲ ಭಾಷಣಕ್ಕೆ ಸೀಮಿತಗೊಂಡಿರುವ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶೀ ಕಪ್ಪು ಹಣ ತರುವುದು ಸೇರಿದಂತೆ ಜನ್ಲೋಕಪಾಲ್ ಮಸೂದೆ ಜಾರಿಗೊಳಿಸುವಲ್ಲಿ ವಿಫಲರಾಗಿ ‘ವಚನ ಭ್ರ್ರಷ್ಟ’ರಾಗಿದ್ದಾರೆ ಎಂದು ಆರೋಪಿಸಿದರು.
ಡಿಸಿಸಿ ಅಧ್ಯಕ್ಷತೆ ಬೇಡ: ಈ ಹಿಂದೆ ಸುಧೀರ್ಘ ಅವಧಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ದುಡಿದಿರುವ ನನಗೆ ಮತ್ತೆ ಜಿಲ್ಲಾಧ್ಯಕ್ಷ ಹುದ್ದೆ ಬೇಡ ಎಂದು ಸ್ಪಷ್ಟಪಡಿಸಿದ ಅವರು ಹೈಕಮಾಂಡ್ ಬಯಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೂ ಸಿದ್ಧ ಎನ್ನುವ ಮೂಲಕ ಮನದಾಳದ ಬಯಕೆ ಬಿಚ್ಚಿಟ್ಟರು.

