ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ನಿವಾಸಿ ಸಾಮಾಜಿಕ ಕಾರ್ಯಕರ್ತ ನಿತಿನ್ ವಾಸ್ ವಿಭಿನ್ನ ರೀತಿಯಲ್ಲಿ ಸಾರ್ವಜನಿಕರಿಗೆ ಪರಿಸರ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.
ಪರಿಸರಕ್ಕೆ ಬಿದ್ದ ಪ್ಲಾಸ್ಟಿಕ್ ಹೇಗೆ ನಮ್ಮ ದೇಹವನ್ನು ಸೇರುತ್ತದೆ ಎಂಬುದನ್ನು ನಿತಿನ್ ಪ್ಲಾಸ್ಟಿಕ್ ಮರದ ಮೂಲಕ ತೋರಿಸಿದ್ದಾರೆ. ಹಳೆಯ ಒಂದು ರೆಂಬೆ ಕೊಂಬೆಗಳಿರುವ ಸತ್ತು ಹೋದ ಮರಕ್ಕೆ ವಿವಿಧ ರೀತಿಯ ಪ್ಲಾಸ್ಟಿಕ್ ಉಂಡೆ ಮಾಡಿ ಕಟ್ಟಿ ಪಕ್ಷಿಕೆರೆ ಮುಖ್ಯ ಪೇಟೆಯಲ್ಲಿ ನೆಟ್ಟು ಸಾರ್ವಜನಿಕರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ವಿಭಿನ್ನ ರೀತಿಯಲ್ಲಿ ಮಾಡಿದ್ದಾರೆ.
ದಿನನಿತ್ಯ ನಾವು ಉಪಯೋಗಿಸುವ ಪ್ಲಾಸ್ಟಿಕ್ ಮಣ್ಣನ್ನು ಸೇರಿ ನಾವು ಆಹಾರಕ್ಕೆ ಉಪಯೋಗಿಸುವ ಮರ ಗಿಡದ ಮೂಲಕ ಮತ್ತೆ ನಮ್ಮ ದೇಹವನ್ನು ಸೇರುತ್ತದೆ, ಪ್ಲಾಸ್ಟಿಕ್ ಗೆ ಸಾವಿಲ್ಲ ಅದು ಕೊಳೆತು ಹೋಗುದಿಲ್ಲ ಮತ್ತೆ ಜೀವಂತವಾಗಿರುತ್ತದೆ ಎಂಬುದನ್ನು ಈ ಪ್ಲಾಸ್ಟಿಕ್ ಮರದ ಮೂಲಕ ಸಮಾಜಕ್ಕೆ ತೋರಿಸಿದ್ದಾರೆ.
ಪಕ್ಷಿಕೆರೆಯಲ್ಲಿ ಕಲಾತರಂಗ್ ಸಂಸ್ಥೆಯನ್ನು ಕಟ್ಟಿದ ನಿತಿನ್ ವಾಸ್ ಸಮಾಜಿಕ ಕೆಲಸ ಕೇವಲ ಪರಿಸರ ದಿನಕ್ಕೆ ಮಾತ್ರ ಸೀಮಿತವಾಗಿಲ್ಲ ನಿರಂತರ ಹಲವಾರು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮಕ್ಕಳಿಗೆ ಬೇಸಿಗೆಯಲ್ಲಿ ಉಚಿತ ಶಿಬಿರ, ಪಡುಪಣಂಬೂರು ಮತ್ತು ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಮತ್ತು ವಿವಿಧ ಜಾತ್ರೆ, ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಮತ್ತು ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ್ ಮಿಷನ್ ನವರು ತಯಾರಿಸಿದ ಪರಿಸರ ಜಾಗೃತಿಯ ಸಾಕ್ಷಚಿತ್ರವನ್ನು ಪ್ರಾಜೆಕ್ಟರ್ ಮೂಲಕ ಮಕ್ಕಳಿಗೆ ತೋರಿಸಿ ಪರಿಸರ ಜಾಗೃತಿಯ ಬಗ್ಗೆ ಅರಿವನ್ನು ಮೂಡಿಸಿದ್ದಾರೆ.
ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಗ್ರಾಮದ ಸಮಸ್ಯೆ ಬಗ್ಗೆ ಪಂಚಾಯತ್ ಗೆ ಮನದಟ್ಟು ಇದರ ಸಮಸ್ಯೆಯನ್ನು ಹೇಗೆ ಪರಿಹಾರ ಮಾಡ ಬಹುದು ಎಂಬುದನ್ನು ಸೂಚಿಸುತ್ತಾರೆ. ಹೀಗೆ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡು ನಿತಿನ್ ವಾಸ್ ಗ್ರಾಮೀಣ ಭಾಗದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
“ಪ್ಲಾಸ್ಟಿಕ್ ಎಂಬುದು ನಾಶವಾಗದ ವಸ್ತು ಅದು ನಮ್ಮ ಜೀವಕ್ಕೆ ಅಪಾಯಕಾರಿ ಅದು ಮಣ್ಣಲ್ಲಿ ಸೇರಿದರೂ ಮಣ್ಣಾಗುದಿಲ್ಲ, ಮತ್ತೆ ನಮ್ಮ ದೇಹವನ್ನು ಸೇರುವ ಸಾದ್ಯತೆಯೇ ಹೆಚ್ಚು, ಅಲ್ಲದೆ ನಮ್ಮ ಪರಿಸರವನ್ನು ಹಾಳುಗೆಡವುತ್ತದೆ, ಪರಿಸರ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಪ್ಲಾಸಿಟಿಕ್ ಮರವನ್ನು ನಿರ್ಮಿಸಿದ್ದೇನೆ.”
-ನಿತಿನ್ ವಾಸ್ ಪಕ್ಷಿಕೆರೆ, ಸಾಮಾಜಿಕ ಕಾರ್ಯಕರ್ತ


