ಗುರುಪುರ : ಮೀನು ಕೃಷಿಕರ ದಿನಾಚರಣೆಯಂಗವಾಗಿ ಭಾನುವಾರ(ಅ. 11) ಪಿಲಿಕುಳ ನಿಸರ್ಗದಾಮದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಜಂಟಿ ಆಶ್ರಯದಲ್ಲಿ `ಮೀನು ಮರಿ ಬಿತ್ತನೆ’ ಕಾರ್ಯಕ್ರಮ ಜರುಗಿತು.ಪಿಲಿಕುಳ ಸರೋವರದಲ್ಲಿ 20,0000 ಮೀನು ಮರಿಗಳ ಬಿಟ್ಟು ಮಾತನಾಡಿದ ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಶಾಲ ಕೆರೆಗಳಲ್ಲಿ ಇಂತಹ ಮೀನುಗಳ ಸಾಕಾಣಿಕೆ ಮಾಡುವುದರಿಂದ ಸಾಕಷ್ಟು ಆದಾಯ ಗಳಿಸಬಹುದು. ಇಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮೀನು ಸಾಕುವುದರೊಂದಿಗೆ ಪಿಲಿಕುಳ ನಿಸರ್ಗಧಾಮದ ಆದಾಯ ಹೆಚ್ಚಿಸಬೇಕು ಎಂದರು. ಸಚಿವರು ಮೀನು ಕೃಷಿಕರಿಗೆ ಮೀನು ಮರಿ ವಿತರಿಸಿದರು.
ಸಚಿವರ ಜೊತೆಯಲ್ಲಿ ಮೀನುಗಾರಿಕಾ ಇಲಾಖೆ ಉಪ-ನಿರ್ದೇಶಕ ಪಾಶ್ರ್ವನಾಥ, ಡಾ. ಸುಶ್ಮಿತಾ, ದಿಲೀಪ್, ಕೆಎಫ್ಡಿಸಿ ಆಡಳಿತ ನಿರ್ದೇಶಕ ಎಂ ಎಲ್ ದೊಡ್ಮನಿ, ಪಿಲಿಕುಳ ಸಸ್ಯಶಾಸ್ತ್ರ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಸೂರ್ಯಪ್ರಕಾಶ್ ಶೆಣೈ, ಸೆಕ್ರಟರಿ ಅಧಿಕಾರಿ ದಯಾಸಾಗರ್, ಡಾ. ನಿತಿನ್ ಎನ್ ಕೆ, ಪಿಲಿಕುಳ ಮೀನು ಉದ್ಯಮಿ `ಜೆಮ್ಸ್ ಗೇಟ್ ಜ್ಯುವೆಲ್ಲರ್ಸ್’ ಮಾಲಕ ಡಾ. ಎಂ ಎಸ್ ನಝೀರ್, ನಾಗೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಪಿಲಿಕುಳ ಮೀನುಗಾರಿಕೆ :
ಇಲ್ಲಿನ ಸರೋವರ ಮತ್ತು ಅಕ್ವೇರಿಯಂಗಳಲ್ಲಿ ಮೀನು ಮರಿ ಪೋಷಿಸಲಾಗುತ್ತದೆ. ಈ ಬಾರಿ ಇಲ್ಲಿಗೆ ಶಿವಮೊಗ್ಗದಿಂದ 15 ದಿನಗಳ 20,0000 ಮೀನು ಮರಿ ತಂದು ಬಿಡಲಾಗಿದೆ. ಹಿಂದಿನಂತೆ ಈ ಬಾರಿಯೂ ಪಿಲಿಕುಳ ಅಕ್ವೇರಿಯಂನಲ್ಲಿ 40 ದಿನಗಳವರೆಗೆ ಪೋಷಿಸಿಸಲಾದ ಕಾಮನ್ ಕಾರ್ಫ್(ಗೌರಿಗೆಂಡೆ), ಕಾಟ್ಲ, ರೋಹೂ, ಮೃಗಾಲ್ನಂತಹ ದೊಡ್ಡ ಮೀನುಗಳ ಮರಿಗಳನ್ನು ಬಿಡಲಾಗಿದೆ. ಅಂತೆಯೇ ಪಿಲಿಕುಳ ಅಕ್ವೇರಿಯಂನಲ್ಲಿ 27 ಜಾತಿಯ ಆಲಂಕಾರಿಕ ಮೀನುಗಳಿದ್ದು, ಇವುಗಳಲ್ಲಿ ಕೆಲವು ಜಾತಿಯ ಮೀನುಗಳ ಮಾರಾಟ ಮಾಡಲಾಗುತ್ತದೆ ಎಂದು ಪಿಲಿಕುಳ ಅಕ್ವೇರಿಯಂ ನಿರ್ವಾಹಕ ನಾಗೇಶ್ ಕುಲಾಲ್ ಹೇಳಿದರು.
