ಕೋಲಾರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ, ಪ್ರೋತ್ಸಾಹಕ ಸೊಸೈಟಿ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೋಲಾರ ಜಿಲ್ಲಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ-2019ರನ್ನು ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

vignana parishat_2 (1)
ಶಿಕ್ಷಣಾಧಿಕಾರಿ ಸಿ.ಆರ್ ಅಶೋಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿಜ್ಞಾನ ಪ್ರತಿದಿನವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿದ್ಯಾರ್ಥಿಗಳು ಶಿಕ್ಷಕರು, ಪಾಲಕರು ಪ್ರತಿಯೊಂದು ಕೆಲಸವನ್ನು ಗಮನಿಸಿದರೆ ಅರ್ಥವಾಗುತ್ತದೆ. ಶಾಲೆಯಲ್ಲಿ ಕಲಿಸುವ ವಿಜ್ಞಾನ ಆಗ ಸುಲಭವಾಗುತ್ತದೆ ಎಂದು ತಿಳಿ ಹೇಳಿದರು.ಡಾ.ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನವನ್ನು ದೇಶದ ಅಭಿವೃದ್ಧಿಗಾಗಿ ಹಾಗೂ ವಿಜ್ಞಾನವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀರಾಮರೆಡ್ಡಿ ಮಾತನಾಡಿ, ಯುವ ವಿಜ್ಞಾನಿ ಪ್ರಶಸ್ತಿ ಪಡೆಯಬೇಕಾದರೆ ಪ್ರಾಥಮಿಕ ಹಂತದಿಂದಲೇ ವೀಕ್ಷಿಸಿ, ವಿಷ್ಲೇಷಣೆ ಮಾಡುವುದು ಮತ್ತು ಯಾವುದೇ ವಿಷಯವನ್ನು ಕುತೂಹಲದಿಂದ ಕಲಿಯುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕೆಂದರು.ಮಧ್ಯಾಹ್ನ ಬಹುಮಾನ ವಿತರಣಾ ಸಮಾರಂಭದಲ್ಲಿ ಮಂಜುಳಾ ಭೀಮರಾವ್ ರವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅದರ ಸಾಧನೆ ಮತ್ತು ನಡೆದ ಬಂದ ದಾರಿಯನ್ನು ವಿವರಿಸಿ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಅವರಲ್ಲಿರುವ ಪ್ರತಿಭೆಯನ್ನು ಹೊರತರುತ್ತಿದೆ. ಅದರಲ್ಲಿ ಯುವ ವಿಜ್ಞಾನಿ ಪ್ರಶಸ್ತಿಯೂ ಒಂದಾಗಿದೆ ಎಂದು ಹೇಳಿ ಐನ್‍ಸ್ಟೈನ್ ರವರು ಪ್ರಪಂಚದ ಪ್ರಸಿದ್ಧ ವಿಜ್ಞಾನಿಯಾಗಿದ್ದರೂ ಮಾನವೀಯ ಮೌಲ್ಯಗಳನ್ನು ಹೊಂದಿದ ಬಗ್ಗೆ ಕೆಲವು ನಡೆದ ನೈಜ ಘಟನೆಗಳನ್ನು ವಿವರಿಸಿದರು.

ಬಹುಮಾನ ವಿತರಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಸಮಿತಿ ಸದಸ್ಯ ಈ.ಬಸವರಾಜ್ ಮಾತನಾಡಿ ಸಮಾಜದಲ್ಲಿ ಮೂಢನಂಬಿಕೆ ಹೆಚ್ಚಾಗುತ್ತಿದೆ. ಅದನ್ನು ಹೋಗಲಾಡಿಸಲು ಶಿಕ್ಷಕರು, ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದುದಾಗಿದೆ. ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಗ್ರಹಣದ ಸಂದರ್ಭ ಯಜ್ಞ ಯಾಗಾದಿಗಳ ಮೂಲ ತತ್ವವನ್ನು ಅರಿಯಬೇಕೆಂದರು.

ಜಯಸಿಂಹ ಭಾರಧ್ವಾಜ್, ವೆಂಕಟರವಣಪ್ಪ, ಗಾಯತ್ರಿ ದೇವಿಯವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.ಕೆ.ಜಿ.ಎಫ್‍ನ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿ ಶಿವಶಂಕರ್ ಬಿ ಪ್ರಥಮಸ್ಥಾನ, ಬಂಗಾರಪೇಟೆಯ ಶಾರದಾ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಸುಶ್ಮಾ ಎಸ್. ಪಾಟೀಲ ದ್ವಿತೀಯಸ್ಥಾನ, ಕೋಲಾರದ ಚಿನ್ಮಯ ವಿದ್ಯಾಲಯದ ಆರ್.ಶ್ರೀಶ ತೃತೀಯ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಿ.ಶಿವಕುಮಾರ್ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಮಂಜುನಾಥ್ ಸ್ವಾಗತಿಸಿ, ಸೌಮ್ಯ ನಿರೂಪಿಸಿ, ವೆಂಕಟರವಣಪ್ಪ ವಂದಿಸಿದರು. ಅನಿದಾಸ್ ಮತ್ತು ವಿವಿಧ ಶಾಲೆಯಿಂದ ಆಗಮಿಸಿದ್ದ ಶಿಕ್ಷಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *