ಬಂಟ್ವಾಳ:ತಾಲ್ಲೂಕಿನಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಪುರಾಣ ಪ್ರಸಿದ್ಧ ಅರಳ ಮತ್ತು ಕೊಯಿಲ ಎರಡು ಗ್ರಾಮಗಳ ಗ್ರಾಮದೇವತೆ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರ ತಂಡವೊಂದು ಇಲ್ಲಿನ ಬೃಹತ್ ಆಕಾರದ ದಾರು ವಿಗ್ರಹ ಕಂಡು ಪರಾರಿಯಾದ ಘಟನೆ ಬುಧವಾರ ಬೆಳಿಗ್ಗೆ ತಿಳಿದು ಬಂದಿದೆ. ಇಲ್ಲಿನ ಅರ್ಚಕ ಹರೀಶ ಭಟ್ ಅವರು ಎಂದಿನಂತೆ ಮಂಗಳವಾರ ರಾತ್ರಿ ಸುಮಾರು ಏಳೂವರೆ ಗಂಟೆಗೆ ಪೂಜೆ ಮುಗಿಸಿ ಸಮೀಪದಲ್ಲೇ ಇರುವ ಮನೆಗೆ ತೆರಳಿದ್ದು, ಬುಧವಾರ ಬೆಳಿಗ್ಗೆ 10 ಗಂಟೆಗೆ ಮತ್ತೆ ಅವರು ಎಂದಿನಂತೆ ಪೂಜೆಗೆಂದು ಆಗಮಿಸಿದಾಗ ದೇವಳದ ಎದುರು ಬಾಗಿಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ. ತಕ್ಷಣವೇ ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ಮತ್ತು ಸಮಿತಿ ಸದಸ್ಯ ಜಗದೀಶ ಆಳ್ವ ಅಗ್ಗೊಂಡೆ ಅವರ ಮೂಲಕ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ವಿವರ:
ಈ ದೇವಳದ ಸುತ್ತು ಪೌಳಿ ಎದುರು ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು ಬಳಿಕ ತೀರ್ಥ ಮಂಟಪದಲ್ಲಿದ್ದ ಸ್ಟೀಲ್ ಕಾಣಿಕೆಡಬ್ಬಿಯನ್ನು ತೆರೆಯಲು ವಿಫಲ ಯತ್ನ ನಡೆಸಿರುವುದು ಕಂಡು ಬಂದಿದೆ. ಇದೇ ವೇಳೆ ಗರ್ಭಗುಡಿ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿ ಅಲ್ಲಿಯೂ ಚಿನ್ನಾಭರಣಕ್ಕಾಗಿ ತಡಕಾಡಿದ್ದಾರೆ. ಆದರೆ ಗರ್ಭಗುಡಿಯಲ್ಲಿ ಬೃಹತ್ ಗಾತ್ರದ ನಾಲಗೆ ಹೊರಚಾಚಿ ಅಷ್ಟಭುಜಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದು ನಿಂತಿರುವ ಗರುಡ ಮಹಾಕಾಳಿ ದೇವರ ದಾರು ವಿಗ್ರಹ ಕಂಡು ಕಳ್ಳರು ಭಯಭೀತಗೊಂಡಿರುವುದು ಕಂಡು ಬಂದಿದೆ. ಈ ವಿಗ್ರಹದ ಎದುರಿನಲ್ಲೇ ಇದ್ದ ಬೆಳ್ಳಿ ಲೋಟ, ತಂಬಿಗೆ, ಚಮಚ, ದೀಪ ಮತ್ತಿತರ ಬೆಳ್ಳಿ ಸಾಮಾಗ್ರಿ ಸಹಿತ ಭಕ್ತರು ಸೇವೆಗೆಂದು ಪಾವತಿಸಿದ ಸುಮಾರು 2ಸಾವಿರಕ್ಕೂ ಮಿಕ್ಕಿ ಮೊತ್ತದ ನೋಟು ಹೊಂದಿರುವ ಪುಟ್ಟ ಸ್ಟೀಲ್ ಪೆಟ್ಟಿಗೆ ಕೂಡಾ ಮುಟ್ಟದಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಇನ್ನೊಂದೆಡೆ ಇಲ್ಲಿನ ಮಹಾಗಣಪತಿ ದೇವರ ಗುಡಿ ಎದುರಿನಲ್ಲಿದ್ದ ಸ್ಟೀಲ್ ಕಾಣಿಕೆ ಡಬ್ಬಿಯೊಂದು ದೇವಳದ ಹೊರಗೆ ರಸ್ತೆ ಬದಿ ಬಿದ್ದಿರುವುದು ದೊರೆತಿದೆ. ಭಾರೀ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಈ ದೇವಸಾನವು ಕಳೆದ ಆರು ತಿಂಗಳ ಹಿಂದೆಯಷ್ಟೇ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ. ಕಳೆದ 1976ರಲ್ಲಿ ಕೂಡಾ ಇಲ್ಲಿನ ಹಳೆಯ ದೇವಸ್ಥಾನಕ್ಕೆ ಕಳ್ಳರು ಒಳ ಪ್ರವೇಶಿಸಿದ್ದರೂ ಅಂದು ಕೂಡಾ ಯಾವುದೇ ಕಳವು ನಡೆಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಈ ನಡುವೆ ದೇವಳದ ಎದುರು ಮಂಗಳವಾರ ತಡರಾತ್ರಿ ತನಕವೂ ಉರಿಯುತ್ತಿದ್ದ ಹೈಮಾಸ್ಟ್ ದೀಪ ಬುಧವಾರ ಮುಂಜಾನೆ ಮಾತ್ರ ಸುಮಾರು 4 ಗಂಟೆಗೆ ಉರಿಯುತ್ತಿರಲಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಿಸಿ ಕ್ಯಾಮೆರಾ ಅಳವಡಿಸಲು ಸೂಚನೆ:
ದೇವಸ್ಥಾನದಲ್ಲಿ ಚಿನ್ನಾಭರಣ ಇಲ್ಲದಿದ್ದರೂ ಎಲ್ಲಾ ಧಾರ್ಮಿಕ ಕೇಂದ್ರಗಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರ ಸಭೆ ನಡೆಸಲಾಗಿದೆ. ಇದರಿಂದಾಗಿ ಇಲ್ಲಿಯೂ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಕುಮಾರ್ ಸೂಚಿಸಿದ್ದಾರೆ. ಪ್ರೊಬೆಶನರಿ ಎಸೈ ನಿತ್ಯಾನಂದ, ಮಾದೇಶ, ಎಎಸೈ ಭಾಸ್ಕರ, ಸುರೇಶ್ ಕುಮಾರ್ ಮತ್ತಿತರರು ಸ್ಥಳ ಪರಿಶೀಲನೆ ನಡೆಸಿದರು.
ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ಸಮಿತಿ ಸದಸ್ಯ ಜಗದೀಶ ಆಳ್ವ ಅಗ್ಗೊಂಡೆ, ಡೊಂಬಯ ಬಿ.ಅರಳ, ಚಂದ್ರಶೇಖರ ಶೆಟ್ಟಿ, ಮುರಳೀಧರ ಶೆಟ್ಟಿ, ಉಮೇಶ್ ಡಿ.ಅರಳ, ರಂಜನ್ ಕುಮಾರ್ ಶೆಟ್ಟಿ, ರವಿ ಅರಸ ಕಲ್ಲೇರಿ, ಸುಕುಮಾರ್, ಗಿರೀಶ ಶೆಟ್ಟಿ, ಪ್ರಧಾನ ಅರ್ಚಕ ಎ.ರಾಜಾ ಭಟ್, ಅರ್ಚಕರಾದ ಹರೀಶ ಭಟ್ ಮತ್ತು ದಿನೇಶ ಭಟ್ ರಾಯಿ ಮತ್ತಿತರರು ಇದ್ದರು.
ದೇವಳಕ್ಕೆ ಭದ್ರತೆ ಒದಗಿಸಲು ಆಗ್ರಹ:
ತಾಲ್ಲೂಕಿನ ಕಡೆಶಿವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳ ಹಿಂದೆಯೇ ಕಳ್ಳರು ನುಗ್ಗಿ ರೂ 5.13ಲಕ್ಷಕ್ಕೂ ಮಿಕ್ಕಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮ ದೇವಸ್ಥಾನಕ್ಕೆ ನುಗ್ಗಿ ಕಳವಿಗೆ ವಿಫಲ ಯತ್ನ ನಡೆದಿದೆ. ಇಲ್ಲಿನ ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆ ಸಮೀಪದಲ್ಲೇ ಇರುವ ವಕೀಲ ಮತ್ತು ದಾಸ್ತಾವೇಜು ಬರಹಗಾರರ ಮನೆಗೆ ಬುಧವಾರ ಹಾಡಹಗಲೇ ಕಳ್ಳರು ನುಗ್ಗಿದ್ದಾರೆ. ಇದರಿಂದಾಗಿ ಎಲ್ಲಾ ದೇವಾಲಯಗಳಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜೊತೆಗೆ ಕಳ್ಳರನ್ನು ಕೂಡಲೇ ಬಂಧಿಸಬೇಕು ಎಂದು ಇಲ್ಲಿನ ಬಿಜೆಪಿ ಮುಖಂ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಆಗ್ರಹಿಸಿದ್ದಾರೆ.
ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ಕಳ್ಳರ ಲಗ್ಗೆ ಬೃಹತ್ ಗಾತ್ರದ ದೇವರ ದಾರು ವಿಗ್ರಹ ಕಂಡು ಪರಾರಿಯಾದ ಕಳ್ಳರು…?
