ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್ ತಾಲೂಕಿನ ಅಧಿಕಾರಿಗಳಿಗೆ ಕೆಲವು ಜವಬ್ದಾರಿಗಳನ್ನು ನೀಡಿದ್ದು ಅವುಗಳನ್ನು ಒಂದು ವಾರದೊಳಗಾಗಿ ಕಾರ್ಯಗತಗೊಳಿಸುವಂತೆ ಅಧೀನ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

meet

ರಸ್ತೆ ಅಗಲೀಕರಣ, ಬಸ್‍ಬೇ ನಿರ್ಮಾಣ, ಪಾರ್ಕಿಂಗ್ ಸಮಸ್ಯೆ, ಅಕ್ರಮ ಕಟ್ಟಡಗಳ ತೆರವು ಸೇರಿದಂತೆ ಪುರಸಭಾ ವ್ಯಾಪ್ಯಿಯ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ಸಂಜೆ ಪುರಸಭಾ ಮೀಟಿಂಗ್ ಹಾಲ್‍ನಲ್ಲಿ ಅವರು ಅಧಿಕಾರಿಗಳ ಹಾಗೂ ಪುರಸಭಾ ಸದಸ್ಯರ ಸಭೆ ನಡೆಸಿ ಪುರಸಭಾ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಪುರಸಭಾ ಸದಸ್ಯರಿಂದ ಇಲ್ಲಿನ ಸಮಸ್ಯೆಗಳನ್ನು ಆಲಿಸಿ ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ಮಣಿಹಳ್ಳ ಬಳಿ ರಸ್ತೆ ಅಗಲೀಕರಣ, ಬಿ.ಸಿ.ರೋಡು, ಕೈಕಂಬ, ಹಾಗೂ ಬಂಟ್ವಾಳ ಬೈಪಾಸ್‍ನಲ್ಲಿ ಬಸ್ ಬೇ ನಿರ್ಮಾಣಕ್ಕೆ ಸರ್ವೆ, ಚರಂಡಿ ನಿರ್ಮಾಣ, ಸರ್ವಿಸ್ ರಸ್ತೆಗೆ ಡಾಮಾರೀಕರಣ ಮೊದಲಾದ ಕೆಲಸಗಳನ್ನು ಒಂದು ವಾರದೊಳಗಾಗಿ ಆರಂಭಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್ ಅವರಿಗೆ ಡಿಸಿ ಸೂಚಿಸಿದರು. ಸ್ಥಳೀಯ ಅಂಗಡಿದಾರರಿಗೆ ಪರಿಹಾರ ಮೊತ್ತ ನೀಡಿಯೂ ರಸ್ತೆ ಅಗಲೀಕರಣಕ್ಕೆ ತೊಡಕಾಗುವ ಕಟ್ಟಡಗಳನ್ನು ತೆರವುಗೊಳಿಸದಿರುವ ಬಗ್ಗೆ ಎನ್‍ಎಚ್‍ಎಐನ ಎಂಜಿನಿಯರನ್ನು ಡಿಸಿ ತರಾಟೆಗೆ ತೆಗೆದುಕೊಂಡರು.

ಪಾಣೆಮಂಗಳೂರು ನೇತ್ರಾವತಿ ನದಿ ತೀರದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವ ಕಟ್ಟಡವನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿಗೆ ಸೂಚಿಸಿದ ಡಿಸಿ ನೇತ್ರಾವತಿ ನದಿಗೆ ಕಸ ಎಸೆಯುವವರ ವಿರುದ್ದ ನಿಗಾ ಇಡುವಂತೆ ತಿಳಿಸಿದರು. ಪುರಸಭಾ ವ್ಯಾಪ್ತಿಯೊಳಗಿರುವ ಎಲ್ಲಾ ಅಕ್ರಮ ಕಟ್ಟಡಗಳಿಗೆ ನೋಟಿಸು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಅನಧಿಕೃತ ಅಂಗಡಿಗಳ ತೆರವುಗೊಳಿಸುವಂತೆ ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಅವರಿಗೆ ಸೂಚಿಸಿದರು. ಪುರಸಭೆ ಸಾಮಾನ್ಯ ಸಭೆಯ ನಿರ್ಣಯಗಳು ಅನುಷ್ಠಾನಗೊಳ್ಳದಿರುವ ಬಗ್ಗೆ ವಿಪಕ್ಷ ಸದಸ್ಯ ಗೋವಿಂದ ಪ್ರಭು ಅವರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಭೆಯ ಎಲ್ಲಾ ನಿರ್ಣಯಗಳು ಅನುಷ್ಠಾನಗೊಳಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಮಾತ್ರವದಲ್ಲದೆ ಈ ಬಗ್ಗೆ ತಪ್ಪು ವರದಿ ನೀಡಿದರೆ ಶಿಸ್ತು ಕ್ರಮ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

ಬಿ.ಸಿ.ರೋಡು ಬಸ್ ತಂಗುದಾಣ ನಿರ್ಮಿಸಲು ನೆಲ ಸಮತಟ್ಟುಗೊಳಿಸಿದ್ದ ಸ್ಥಳಕ್ಕೆ ತಾ.ಪಂ. ಅಧಿಕಾರಿಗಳು ಬೇಲಿ ಹಾಕಿರುವ ಬಗ್ಗೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಸಣ್ಣ ಪಟ್ಟ ಸಮಸ್ಯೆ ಬಗ್ಗೆಯೂ ಪುರಸಭಾ ಸದಸ್ಯರು ಜಿಲ್ಲಾಧಿಕಾರಿಯ ಗಮನ ಸೆಳೆದಾಗ ಎಲ್ಲವೂ ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಸ್ತಾಪವಾಗುವುದಾದದರೆ ಇಲ್ಲಿ ಪುರಸಭೆ ಕೌನ್ಸಿಲ್, ಅಧಿಕಾರಿಗಳು ಯಾಕಿರುವುದು? ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸಭೆಯ ಬಳಿಕ, ಮಣಿಹಳ್ಳ, ಬಂಟ್ವಾಳ ಬೈಪಾಸ್ ಜಂಕ್ಷನ್, ಪಾಣೆಮಂಗಳೂರು, ಕೈಕುಂಜೆ, ಬಿ.ಸಿ.ರೋಡು ಹಾಗೂ ಕೈಕಂಬಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಬಗ್ಗೆ ಮಾರ್ಗದರ್ಶನ ಮಾಡಿದರು. ಅಧೀನ ಅಧಿಕಾರಿಗಳಿಗೆ ಸೂಚಿಸಿರುವ ಎಲ್ಲಾ ಕೆಲಸಗಳ ಮೇಲ್ವಿಚಾರಣೆ ಮಾಡುವಂತೆ ಪ್ರೊಬೇಷನರಿ ಸಹಾಯಕ ಆಯುಕ್ತೆ ಗಾರ್ಜಿ ಜೈನ್ ಅವರಿಗೆ ಸೂಚಿಸಿದರು.

ಈ ಸಂದರ್ಭ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹ್ಮಮದ್ ನಂದರಬೆಟ್ಟು, ಸದಸ್ಯರಾದ ಮಹಮ್ಮದ್ ಶರೀಫ್, ಗೋವಿಂದ ಪ್ರಭು, ಗಂಗಾಧರ್, ಜಗದೀಶ ಕುಂದರ್, ಇಕ್ಬಾಲ್ ಗೂಡಿನ ಬಳಿ ಮುಖ್ಯಾಧಿಕಾರಿ ಸುಧಾಕರ ಎಂಚ್, ಸಹಾಯಕ ಆಯುಕ್ತ ರೇಣುಕ ಪ್ರಸಾದ್, ಯೋಜನಾ ನಿದೇರ್ಶಕ ಪ್ರಸನ್ನ, ಕಾರ್ಯನಿರ್ವಾಹಕ ಎಂಜಿನಿಯರ್ ತೇಜೋಮೂರ್ತಿ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಸಿಪ್ರಯಾನ್ ಮಿರಾಂಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್ ಕುಮಾರ್, ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಉಮೇಶ್ ಭಟ್, ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *