ಕೈಕಂಬ: ವ್ಯವಸಾಯ ಸೇವಾ ಸಹಕಾರಿ ಸಂಘವು ಬಿ.ಸಿ.ರೋಡಿನ ಕೈಕಂಬದ ಪೊಳಲಿ ಕ್ರಾಸ್ ಬಳಿ ಹೊಂದಿರುವ ಸ್ವಂತ ನಿವೇಶನದಲ್ಲಿ ಸುಮಾರು 1.05 ಕೋಟಿ ರೂ. ವೆಚ್ಚದಲ್ಲಿ ಸಂಘದ ಸ್ವಂತ ಕಟ್ಟಡಕ್ಕೆ ಅ. 8ರಂದು ಬೆಳಗ್ಗೆ 10:35ಕ್ಕೆ ಶಿಲಾನ್ಯಾಸ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿ.ಆನಂದ ತಿಳಿಸಿದ್ದಾರೆ. ಬುಧವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಮೀನಿನ ಸಂಬಂಧ ಇದ್ದ ವ್ಯಾಜ್ಯ ನ್ಯಾಯಾಲಯದಲ್ಲಿ ಈಗಾಗಲೇ ಇತ್ಯರ್ಥಗೊಂಡಿದ್ದು ಸಂಘದ ಪರವಾಗಿ ತೀರ್ಪು ಬಂದಿದೆ. ಇದೀಗ ಸಂಘದಿಂದ ಈ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ ಎಂದರು.

20161005_170735-1

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಶಿಲನ್ಯಾಸ ನೆರವೇರಿಸಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ವಿಪಕ್ಷ ನಾಯಕ ಗೋವಿಂದ ಪ್ರಭು, ಸದಸ್ಯ ಸದಾಶಿವ ಬಂಗೇರ, ಡಿಸಿಸಿ ಬ್ಯಾಂಕ್‍ನ ನಿರ್ದೇಶಕ ರಾಜಾರಾಮ ಭಟ್ ಟಿ.ಜಿ., ಸಹಕಾರಿ ಸಂಘದ ಉಪ ನಿಬಂಧಕ ಬಿ.ಕೆ.ಸಲೀಂ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

48.69 ಲಕ್ಷ ರೂ. ಲಾಭ: ಬಂಟ್ವಾಳ ವಿಎಸ್‍ಎಸ್ ಬ್ಯಾಂಕ್ ಅತ್ಯಂತ ಹಳೆಯ ಬ್ಯಾಂಕ್ ಆಗಿದ್ದು ಪ್ರಸ್ತುತ 3,038 ಮಂದಿ ಸದಸ್ಯರನ್ನು ಹೊಂದಿದೆ. ಸಂಘವು 2015-16ನೆ ಸಾಲಿನಲ್ಲಿ 125.64 ಕೋಟಿ ರೂ. ವ್ಯವಹಾರ ನಡೆಸಿದ್ದು 48.69 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಆನಂದ ತಿಳಿಸಿದ್ದಾರೆ. ಈ ಬಾರಿ ಸದಸ್ಯರಿಗೆ ಶೇ.12 ಡಿವಿಡೆಂಡನ್ನು ನೀಡಲಾಗಿದೆ. ಬಂಟ್ವಾಳದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಸಂಘವು ಬಿ.ಸಿ.ರೋಡ್, ನಾವೂರ, ಪಂಜಿಕಲ್ಲುವಿನಲ್ಲಿ ಶಾಖೆಗಳನ್ನು ಹೊಂದಿದೆ. ಹಾಗೆಯೇ ಬಿ.ಮೂಡ, ಬಿ.ಕಸ್ಬಾ, ನಾವೂರ, ಪಂಜಿಕಲ್ಲು, ದೇವಸ್ಯ ಪಡೂರು ಗ್ರಾಮಗಳನ್ನು ಒಳಗೊಂಡಿದೆ ಎಂದರು.  ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *