ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವಿದ್ಯಾಗಿರಿ ಆಳ್ವಾಸ್ ನುಡಿಸಿರಿ ಶುಕ್ರವಾರ ವೇದಿಕೆಯಲ್ಲಿ ಶುಕ್ರರವಾರ ನಡೆಯಿತು. ಸಾಧಕ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಡಾ.ನಾ ದಾಮೋದರ ಶೆಟ್ಟಿ, ಬೆಳ್ತಂಗಡಿ ಶ್ರೀಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ, ಉಳ್ಳಾಲ ನಿವೃತ್ತ ಶಿಕ್ಷಕ ವಿದ್ವಾನ್ ಉಳ್ಳಾಲ ಮೋಹನ ಕುಮಾರ್, ಪುತ್ತೂರು ನಿವೃತ್ತ ಪ್ರಾಧ್ಯಾಪಕ ಡಾ.ಸುಕುಮಾರ ಗೌಡ ಹಾಗೂ ಮಂಗಳೂರಿನ ಬದ್ರಿಯಾ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಇಸ್ಮಾಯಿಲ್ ಎನ್. ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸುಕುಮಾರ ಗೌಡ, ವೃತ್ತಿಪರತೆಯ ಕಡೆಗೆ ಸಾಗುವುದು ಶಿಕ್ಷಕನ ಕರ್ತವ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ತತ್ವ, ಸತ್ವ ಮುಖ್ಯ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತಾವು ಜೀವನೋಲ್ಲಾಸದಿಂದ ಇದ್ದು ವಿದ್ಯಾರ್ಥಿಗಳಲ್ಲೂ ಜೀವನೋಲ್ಲಾಸವನ್ನು ಮೂಡಿಸುವ ಪ್ರಯತ್ನ ಶಿಕ್ಷಕರಿಂದಾಗಬೇಕು. ಮಾದರಿ ಶಿಕ್ಷಣ ಸಂಸ್ಥೆಯಾಗಬೇಕಾದರೆ, ಶಿಕ್ಷಕರಲ್ಲಿಯೂ ಜವಾಬ್ದಾರಿ ಇರಬೇಕಾಗುತ್ತದೆ. ಸತ್ಯ ದೃಷ್ಠಿಯಲ್ಲಿ ಶಿಕ್ಷಣ ಒದಗಿಸುವಲ್ಲಿಯೂ ಶಿಕ್ಷಕರು ಮುಖ್ಯ ಪಾತ್ರ ವಹಿಸಬೇಕು ಎಂದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉದಯ ಮಂಜುನಾಥ್, ಶಿವಪ್ರಸಾದ್, ಸುಧಾರಾಣಿ, ಟಿ.ಎ.ಎನ್ ಖಂಡಿಗೆ ಸನ್ಮಾನ ಪತ್ರ ವಾಚಿಸಿದರು.

